ಕ್ರಿಕೆಟ್

2ನೇ ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 391 ರನ್ ಗೆ ಇಂಗ್ಲೆಂಡ್ ಆಲೌಟ್, ಭಾರತದ ವಿರುದ್ಧ 27 ರನ್ ಗಳ ಮುನ್ನಡೆ

Srinivasamurthy VN

ಲಾರ್ಡ್ಸ್: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 391 ರನ್ ಗಳಿಗೆ ಆಲೌಟ್ ಆಗಿದೆ. 

ಲಂಡನ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ನ 364ರನ್ ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ 391ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 27 ರನ್ ಗಳ ಮುನ್ನಡೆ ಸಾಧಿಸಿತು.

ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ನಾಯಕ ಜೋ ರೂಟ್ ಭರ್ಜರಿ ಬ್ಯಾಟಿಂಗ್ ನಡೆಸಿ 180 ರನ್ ಗಳಿಸಿ ಅಜೇಯರಾಗಿ ಉಳಿದರು. ರೂಟ್ ಗೆ ಜಾನಿ ಬೇರ್ ಸ್ಟೋ ಉತ್ತಮ ಸಾಥ್ ನೀಡಿ ಅವರೂ ಸಹ 57 ರನ್ ಗಳಿಸಿದರು. ಬಳಿಕ ಜಾಸ್ ಬಟ್ಲರ್ 23 ರನ್ ಮತ್ತು ಮೊಯಿನ್ ಅಲಿ 27 ರನ್ ಗಳಿಸಿ ಭಾರತಕ್ಕೆ ಕೊಂಚ ತಲೆನೋವಾದರು. ಈ ಹಂತದಲ್ಲಿ ದಾಳಿಗಿಳಿದ ಇಶಾಂತ್ ಶರ್ಮಾ ಈ ಇಬ್ಬರೂ ದಾಂಡಿಗರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾದರು. 

ಬಳಿಕ ಕ್ರೀಸ್ ಗೆ ಬಂದ ಸ್ಯಾಮ್ ಕರ್ರನ್ ಶೂನ್ಯ ಸಾಧನೆ, ಒಲಿ ರಾಬಿನ್ಸನ್ 6, ಮಾರ್ಕ್ ವುಡ್ 5, ಜೇಮ್ಸ್ ಆ್ಯಂಡರ್ಸನ್ ಶೂನ್ಯ ಗಳಿಸಿದರು. ಹೀಗಾಗಿ ಸವಾಲಿನ ಮೊತ್ತ ಕಲೆಹಾಕುವ ರೂಟ್ ಕನಸು ಭಗ್ನವಾಯಿತು. ಭಾರತದ ಪರ ಮಹಮದ್ ಸಿರಾಜ್ 4, ಇಶಾಂತ್ ಶರ್ಮಾ 3 ಮತ್ತು ಶಮಿ 2 ವಿಕೆಟ್ ಪಡೆದರು.
 

SCROLL FOR NEXT