ಕ್ರಿಕೆಟ್

ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟಿಗ ರಿಷಬ್ ಪಂತ್ ನೇಮಕ

Srinivasamurthy VN

ಡೆಹ್ರಾಡೂನ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಉತ್ತರಾಖಂಡ ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ.

ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಾಹಿತಿ ನೀಡಿದ್ದು, ರಾಜ್ಯದ ರಾಯಭಾರಿಯಾಗಿ ಪಂತ್ ನೇಮಕಗೊಳ್ಳುವ ಮೂಲಕ ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

'ರಾಜ್ಯದ ಯುವಕರನ್ನು ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು, ಯುವಕರ ರೋಲ್ ಮಾಡೆಲ್ ಮತ್ತು ಉತ್ತರಾಖಂಡದ ಪುತ್ರ ರಿಷಬ್ ಪಂತ್ ಅವರನ್ನು ನಮ್ಮ ಸರ್ಕಾರವು ‘ರಾಜ್ಯ ಬ್ರಾಂಡ್ ಅಂಬಾಸಿಡರ್’ ಆಗಿ ನೇಮಿಸಿದೆ ಎಂದು ಅವರು ಧಾಮಿ ಹೇಳಿದ್ದಾರೆ.

ಸಿಎಂಗೆ ಧನ್ಯವಾದ ಹೇಳಿದ ಪಂತ್
ಇನ್ನು ತಮ್ಮನ್ನು ಸರ್ಕಾರದ ರಾಯಭಾರಿಯಾಗಿ ನೇಮಕ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿರುವ ರಿಷಬ್ ಪಂತ್, 'ಫಿಟ್ನೆಸ್‌ನತ್ತ ಜನರನ್ನು ಪ್ರೇರೇಪಿಸಲು ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. 

'ಉತ್ತರಾಖಂಡದ ಜನರಲ್ಲಿ ಕ್ರೀಡೆ ಮತ್ತು ಸಾಮಾನ್ಯ ಆರೋಗ್ಯವನ್ನು ಉತ್ತೇಜಿಸುವ ಬ್ರಾಂಡ್ ಅಂಬಾಸಿಡರ್ ಆಗಲು ನನಗೆ ಅವಕಾಶ ನೀಡಿದ ಸಿಎಂ ಧಾಮಿ ಅವರಿಗೆ ಧನ್ಯವಾದಗಳು. ಈ ಸಂದೇಶವನ್ನು ಹರಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ.ರೂರ್ಕಿಯ ಸಣ್ಣ ಪಟ್ಟಣದಿಂದ ಬಂದಿರುವ ನನಗೆ ಇಲ್ಲಿನ ಜನರು ಜೀವನದ ವಿವಿಧ ಕ್ಷೇತ್ರಗಳಲ್ಲಿ ದೇಶವನ್ನು ಹೆಮ್ಮೆಪಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ವಿಶ್ವಾಸವಿದೆ ಎಂದು ಪಂತ್ ಟ್ವೀಟ್ ಮಾಡಿದ್ದಾರೆ.

ಇನ್ನು ನ್ಯೂಜಿಲೆಂಡ್ ಟೆಸ್ಟ್‌ ಸರಣಿಯಿಂದ ವಿಶ್ರಾಂತಿ ಪಡೆದಿದ್ದ 24 ವರ್ಷದ ಪಂತ್, ಪ್ರಸ್ತುತ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿದ್ದು, ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಫ್ರಿಕಾ ತಂಡವನ್ನು ಎದುರಿಸಲು ಭಾರತ ತಂಡವು ಸಿದ್ಧವಾಗಿದೆ. 

SCROLL FOR NEXT