ಕ್ರಿಕೆಟ್

ಇಂಗ್ಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ ಪಡೆಯ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು!

Manjula VN

ಲಂಡನ್: ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್​​ ಮುಕ್ತಾಯದ ಬಳಿಕ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆಡಲು ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದುಕೊಂಡಿದ್ದು, ಇದೀಗ ತಂಡದ ಇಬ್ಬರು ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂಲಗಳ ಪ್ರಕಾರ, ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದು ತಿಳಿಸಿದ್ದು, ಉಳಿದ ಆಟಗಾರರ ವರದಿ ಬಹಿರಂಗಗೊಳ್ಳಬೇಕಾಗಿದೆ. 

ಕೊರೋನಾ ಸೋಂಕು ತಗುಲಿರುವ ಇಬ್ಬರೂ ಆಟಗಾರರು ಲಕ್ಷಣ ರಹಿತರಾಗಿದ್ದು, ಕೆಮ್ಮು ಹಾಗೂ ಶೀತವಿರುವುದಾಗಿ ತಿಳಿದುಬಂದಿದೆ. ಇಬ್ಬರೂ ಆಟಗಾರರು ಇದೀಗ ಐಸೋಲೇಷನ್ ನಲ್ಲಿದ್ದಾರೆಂದು ವರದಿಗಳು ತಿಳಿಸಿವೆ. 

ಇಂದು ಮಧ್ಯಾಹ್ನ ಟೀಂ ಇಂಡಿಯಾದ ಎಲ್ಲ ಪ್ಲೇಯರ್ಸ್​​ ಡರ್ಹಾಮ್​ಗೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ಇಬ್ಬರು ಆಟಗಾರರಲ್ಲಿ ಸೋಂಕು ದೃಢಪಟ್ಟಿರುವುದು ಆತಂಕ ಹೆಚ್ಚಿಸಿದೆ. 

ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಪ್ಲೇಯರ್ಸ್​ ಕೂಡ ಕೋವಿಡ್ ಸೋಂಕಿಗೊಳಗಾಗಿದ್ದರು. ಜತೆಗೆ ಇಂಗ್ಲೆಂಡ್​ನ ಅನೇಕ ಪ್ಲೇಯರ್ಸ್​ ಸೋಂಕಿಗೊಳಗಾಗಿದ್ದ ಕಾರಣ ಪಾಕ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಟೆಸ್ಟ್​ ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಟೀಂ ಇಂಡಿಯಾಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಟೂರ್ನಿ ಆರಂಭಗೊಳ್ಳಲು 3 ವಾರಗಳ ಕಾಲ ಬಾಕಿ ಉಳಿದಿರುವ ಸಂದರ್ಭದಲ್ಲಿ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 

ನ್ಯೂಜಿಲ್ಯಾಂಡ್ ವಿರುದ್ಧದ ಫೈನಲ್​ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಕೆಲ ದಿನಗಳ ಕಾಲ ವಿಶ್ರಾಂತಿ ನೀಡಲಾಗಿದ್ದು, ವಿವಿಧ ಪ್ರದೇಶಗಳಲ್ಲಿ ಸುತ್ತಾಡಿರುವುದರಿಂದ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.

SCROLL FOR NEXT