ಕ್ರಿಕೆಟ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಂತರ ಕೊಹ್ಲಿ ಪಡೆಗೆ ಬಯೋ-ಬಬಲ್ ನಿಂದ 20 ದಿನಗಳ ವಿರಾಮ: ಮೂಲಗಳು

Vishwanath S

ನವದೆಹಲಿ: ಸೌತಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಆಟಗಾರರಿಗೆ ಬ್ರಿಟನ್ ನಲ್ಲಿ ಬಯೋ ಬಬಲ್ ಜೀವನದಿಂದ 20 ದಿನಗಳ ವಿರಾಮ ಸಿಗಲಿದೆ. 

ಜೂನ್ 24ಕ್ಕೆ ಮುಗಿದರೆ ನಂತರ ಜುಲೈ 14ಕ್ಕೆ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಆಟಗಾರರು ಮತ್ತೆ ಬಯೋ-ಬಬಲ್ ಗೆ ಮರಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಂತರ ಟೀಂ ಇಂಡಿಯಾ ಆಟಗಾರರು ಐಪಿಎಲ್ ಬಬಲ್‌ಗೆ ನೇರವಾಗಿ ಬರುತ್ತಾರೆ. 

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಫೈನಲ್ ಪಂದ್ಯದ ನಂತರ ಜೂನ್ 24ರಿಂದ ತಂಡ ವಿರಾಮ ಸಿಕ್ಕರೆ, ಜುಲೈ 4ರ ಸುಮಾರಿಗೆ ಮತ್ತೆ ಒಟ್ಟಾಗಲಿದ್ದು ಆಗಸ್ಟ್ 4ರಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಕ್ರಿಕೆಟಿಗರು ಕಡಿಮೆ ಅಥವಾ ಕೋವಿಡ್ ಪ್ರಕರಣಗಳು ಇಲ್ಲದಿರುವ ಯಾವುದೇ ಸ್ಥಳಕ್ಕೆ ಹೋಗಬಹುದೇ ಎಂಬ ಪ್ರಶ್ನೆಗೆ ಬ್ರಿಟನ್ ಒಳಗೆ ಇರಲು ಯಾವುದೇ ಸಮಸ್ಯೆ ಇಲ್ಲ. ಆದರೆ ಆಟಗಾರರು ಹಾಗೂ ಕುಟುಂಬ ಹೆಚ್ಚು ಜಾಗರೂಕವಾಗಿ ಇರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಯೋ-ಬಬಲ್‌ನಲ್ಲಿ ಇರುವುದು ಸುಲಭವಲ್ಲ. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಸಹ ತಂಡ ಇಂಗ್ಲೆಂಡ್‌ಗೆ ತೆರಳುವ ಮುನ್ನ ಈ ಬಗ್ಗೆ ಮಾತನಾಡಿದರು. ನಿರಂತರವಾಗಿ ಬಯೋ-ಬಬಲ್ ನಲ್ಲಿ ಇರುವುದರಿಂದ ಆಟಗಾರರ ಮನಸ್ಥೈರ್ಯ ಕುಂದುತ್ತದೆ. ಒತ್ತಡ ಹೆಚ್ಚುತ್ತದೆ ಹೀಗಾಗಿ ವಿರಾಮ ಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದರು.

SCROLL FOR NEXT