ಕ್ರಿಕೆಟ್

ಐಪಿಎಲ್-2021: ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಪಡೆ 

Srinivasamurthy VN

ಅಹಮದಾಬಾದ್: ಭರ್ಜರಿ ಫಾರ್ಮ್ ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 14ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿದ್ದು, ಗೆಲುವಿನ ಟ್ರ್ಯಾಕ್ ಗೆ ಮರಳಲು ಯೋಜನೆ ರೂಪಿಸಿಕೊಂಡಿದೆ.

ಸೋಮವಾರ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈವರೆಗೆ ಉಭಯ ತಂಡಗಳು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಬೆಂಗಳೂರು 12 ಹಾಗೂ ಕೋಲ್ಕತ್ತಾ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರ್ ಸಿಬಿ 10 ಅಂಕಗಳನ್ನು ಕಲೆ ಹಾಕಿದರೂ, ರನ್  ಸರಾಸರಿಯಲ್ಲಿ ಹಿಂದೆ ಬಿದ್ದಿರುವುದು ತಂಡದ ಚಿಂತೆ ಹೆಚ್ಚಿಸಿದೆ.

ಚೆನ್ನೈ ಹಾಗೂ ಪಂಜಾಬ್ ವಿರುದ್ಧದ ಸೋಲುಗಳಿಂದಾಗಿ ಸರಾಸರಿಗೆ ಪೆಟ್ಟು ಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಕೆಕೆಆರ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಆಟಗಾರ. ಕೊಹ್ಲಿ ಈ ವರೆಗೆ 725 ರನ್ ಕಲೆ  ಹಾಕಿ ಭರವಸೆ ಮೂಡಿಸಿದ್ದಾರೆ. ಇನ್ನು 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಸಹ ರನ್ ಕಲೆ ಹಾಕಿ ಅಬ್ಬರಿಸಬಲ್ಲರು. ಆರಂಭಿಕ ದೇವದತ್ ಪಡೀಕ್ಕಲ್ ಸಮಯೋಚಿತ ಬ್ಯಾಟಿಂಗ್ ಮೂಲಕ ರನ್ ಗಳನ್ನು ಕಲೆ ಹಾಕಬೇಕಿದೆ.

ಮಧ್ಯಮ ಕ್ರಮಾಂಕದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್, ರಜತ್ ಪಟೀದಾರ್ ಪಿಚ್ ಮರ್ಮ್ ವನ್ನು ಅರಿತು ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ವಾಶಿಂಗ್ಟನ್ ಸುಂದರ್ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ. ಬೆಂಗಳೂರು ತಂಡದ  ವೇಗದ ಬೌಲಿಂಗ್ ವಿಭಾಗ ಉತ್ತಮವಾಗಿದೆ.

ಕೈಲ್ ಜೇಮಿಸನ್, ಡೇನಿಯಲ್ ಸ್ಯಾಮ್ಸ್ ಮತ್ತು ಮೊಹಮ್ಮದ್ ಸಿರಾಜ್ ಬಿಗುವಿನ ದಾಳಿ ನಡೆಸಿ ಎದುರಾಳಿಗಳನ್ನು ಕಾಡಬಲ್ಲರು. ಕೋಲ್ಕತ್ತಾ ವಿರುದ್ಧ ಹಿಂದಿನ ಆವೃತ್ತಿಗಳಲ್ಲಿ ಹೆಚ್ಚು ವಿಕೆಟ್ ಗಳನ್ನು ಪಡೆದಿರುವ ಯಜುವೇಂದ್ರ ಚಹಾಲ್ ಸ್ಪಿನ್ ಜಾದು ನಡೆಸಬೇಕಿದೆ.  ಅಂದಾಗ ತಂಡ ಗೆಲುವು ಸನಿಹವಾಗುತ್ತದೆ.

ಕೋಲ್ಕತ್ತಾ ತಂಡದ ಸ್ಟಾರ್ ಆಲ್ ರೌಂಡರ್ ಗಳು ಐಪಿಎಲ್ ನ ಹಿಂದಿನ ಆವೃತ್ತಿಗಳಲ್ಲಿ ಅಬ್ಬರಿಸಿದ್ದರು. ಹೀಗಾಗಿ ಸ್ಟಾರ್ ಆಟಗಾರರ ಮೇಲೆ ಚಿತ್ತ ನೆಟ್ಟಿದೆ. ಸುನಿಲ್ ನರೈನ್ ಹಾಗೂ ಆಂಡ್ರಿ ರಸೆಲ್ ಸೊಗಸಾದ ಆಟದ ಪ್ರದರ್ಶನ ನೀಡಿದ್ದಾರೆ. ರಸೆಲ್ ಬೆಂಗಳೂರು ವಿರುದ್ಧ 308 ರನ್ ಕಲೆ ಹಾಕಿದ್ದಾರೆ. ಅಲ್ಲದೆ  ಬೌಲಿಂಗ್ ನಲ್ಲೂ 7 ವಿಕೆಟ್ ಕಬಳಿಸಿದ್ದಾರೆ. ಸುನಿಲ್ ನರೈನ್ ಸಹ 16 ವಿಕೆಟ್ ಗಳನ್ನು ಕಬಳಿಸಿ ಮಿಂಚಿದ್ದಾರೆ. ಕೆಕೆಆರ್ ತಂಡಕ್ಕೆ ಆರಂಭ ತಲೆ ನೋವಾಗಿದೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಯಾವ ಜೋಡಿ ಇನ್ನಿಂಗ್ಸ್ ಆರಂಭಿಸುತ್ತದೆ ಎಂಬ ಕುತೂಹಲ ಮೂಡಿಸಿದೆ.

ಶುಭಮನ್ ಗಿಲ್, ರಾಹುಲ್ ತ್ರಿಪಾಠಿ,  ನಿತೀಶ್ ರಾಣ್ ದೊಡ್ಡ ಇನ್ನಿಂಗ್ಸ್ ಆಡುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಲಯ ಬದ್ಧ ಆಟ ನಡೆಸಬೇಕಿದೆ. ವೇಗದ ವಿಭಾಗದಲ್ಲಿ ಕಾಣಿಸಿಕೊಳ್ಳುವ ಪ್ಯಾಟ್ ಕಮಿನ್ಸ್ ಹಾಗೂ ಪ್ರಸಿದ್ಧ ಕೃಷ್ಣ ಶಿಸ್ತು ಬದ್ಧ ದಾಳಿ ಸಂಘಟಿಸಿ ಎದುರಾಳಿಯನ್ನು ಕಾಡಬೇಕಿದೆ.  ವರುಣ್ ಚಕ್ರವರ್ತಿ ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದು, ಆರ್ಭಟಿಸಬೇಕಿದೆ.
 

SCROLL FOR NEXT