ಕ್ರಿಕೆಟ್

ಹರಿದ ಶೂ ಫೋಟೊ ಶೇರ್ ಮಾಡಿದ ಜಿಂಬಾಬ್ವೆ ಕ್ರಿಕೆಟಿಗ: ಪ್ರಯೋಜಕತ್ವಕ್ಕೆ ಮುಂದಾಗಿ 'ಇನ್ನು ಅದರ ಚಿಂತೆ ಬೇಡ' ಎಂದ 'ಪೂಮಾ'!

Manjula VN

ಹರಾರೆ: ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಳಲುತ್ತಿರುವ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಖ್ಯಾತ ಸ್ಪೋರ್ಟ್ಸ್ ಪರಿಕರಗಳ ತಯಾರಿಕಾ ಸಂಸ್ಥೆ ನೆರವಿಗೆ ಮುಂದಾಗಿದ್ದು, ತಂಡದ ಪ್ರಾಯೋಜಕತ್ವ ವಹಿಸುವ ಸಾಧ್ಯತೆ ಇದೆ.

ಹೌದು.. ಪ್ರಾಯೋಜಕರಿಲ್ಲದೇ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಕಂಗೆಟ್ಟಿದ್ದ ಜಿಂಬಾಬ್ವೆ ತಂಡಕ್ಕೆ ಆಟಗಾರನೋರ್ವ ಮಾಡಿದ್ದ ಒಂದೇ ಒಂದು ಟ್ವೀಟ್ ನೆರವಿನ ಮಹಾಪೂರವೇ ಹರಿದು ಬರುವಂತೆ ಮಾಡಿದೆ. ಜಿಂಬಾಬ್ವೆ ರಾಷ್ಟ್ರೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ರಯಾನ್‌ ಬರ್ಲ್‌ ಅವರು, ರಾಷ್ಟ್ರೀಯ ತಂಡಕ್ಕೆ  ಪ್ರಾಯೋಜಕರು ಬೇಕೆಂದು ವಿನಂತಿ ಮಾಡಿದ್ದು, ತಮ್ಮ ದುಸ್ಥಿತಿಯನ್ನು ಎತ್ತಿತೋರಿಸಲು ಪೂರ್ಣ ಸವೆದುಹೋದ ಶೂಗಳ ಚಿತ್ರವನ್ನು ಟ್ವೀಟ್‌ ಮಾಡಿದ್ದರು. ಮಧ್ಯಮ ಕ್ರಮಾಂಕದ ಎಡಗೈ ಆಟಗಾರ ಬರ್ಲ್‌, ರಾಷ್ಟ್ರೀಯ ತಂಡದ ಪರ ಮೂರು ಟೆಸ್ಟ್‌ಗಳನ್ನು ಆಡಿದ್ದಾರೆ. ಇದರ ಜೊತೆ ಅವರು 18 ಏಕದಿನ, 25 ಟಿ– 20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಟ್ವೀಟ್‌ನಲ್ಲಿ 27 ವರ್ಷದ ಬರ್ಲ್ ಅವರು, ಸವೆದಿರುವ ಶೂ ಜೊತೆಗೆ ಅಂಟು, ಅಂಟುಹಾಕಿದ ಜಾಗವನ್ನು ಯಂತ್ರದ ಪರಿಕರದ ಟೈಟ್ ಮಾಡಿದ್ದರು. ಈ ಚಿತ್ರವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ, ಯಾರಾದರೂ ಸಹಾಯ ಮಾಡುವಿರಾ.. ಪ್ರತಿ ಸರಣಿಯ ನಂತರ ಮತ್ತೆ ಶೂಗಳಿಗೆ ಅಂಟು ಹಾಕುವ ದುಸ್ಥಿತಿ ತಪ್ಪಿಸಲು  ನಮಗೆ ಪ್ರಾಯೋಜಕರು ಸಿಗುವ ಚಾನ್ಸ್‌ ಏನಾದರೂ ಇದೆಯೇ ಎಂದು ಕೇಳಿದ್ದರು. ಇದು ಜಿಂಬಾಬ್ವೆ ಕ್ರಿಕೆಟ್ ತಂಡದ ಪರಿಸ್ಥಿತಿಯನ್ನು ಜಗತ್ತಿಗೇ ಸಾರಿತ್ತು. ಇದಕ್ಕೆ ಕೆಲ ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದ ಜಾಗತಿಕ ಮಟ್ಟದ ಜನಪ್ರಿಯ ಕ್ರೀಡಾ ಸರಕು ಉತ್ಪಾದನಾ ಸಂಸ್ಥೆಯಾದ ಪೂಮಾ, ಜಿಂಬಾಬ್ವೆ ತಂಡಕ್ಕೆ  ಪ್ರಾಯೋಜಕತ್ವ ನೀಡಲು ಮುಂದಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪೂಮಾ, ಗಮ್ ಅನ್ನು ತೆಗೆದು ಪಕ್ಕಕ್ಕೆ ಇಡುವ ಸಮಯ ಬಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಾಯೋಜಕತ್ವ ವಹಿಸುವ ಭರವಸೆ ನೀಡಿದೆ. 

ಕ್ರಿಕೆಟ್ ಹೊರತು ಪಡಿಸಿಯೇ ಜಾಹಿರಾತುಗಳ ಮುಖಾಂತರ ಕೋಟಿ ಕೋಟಿ ಗಳಿಸುತ್ತಿರುವ ಕ್ರಿಕೆಟಿಗರ ಮಧ್ಯೆ ಕ್ರಿಕೆಟ್ ಆಡಲೂ ಕೂಡ ಪ್ರಾಯೋಜಕರಿಲ್ಲದೆ ಜಿಂಬಾಬ್ವೆ ತಂಡ ಪರದಾಡುತ್ತಿದೆ.  ಹಲವು ಕ್ರಿಕೆಟ್‌ ಸಂಸ್ಥೆಗಳು ಪ್ರಾಯೋಜಕತ್ವ ಮೂಲಕ ಸಾವಿರಾರು ಕೋಟಿ ರೂ.ಗಳ ಆದಾಯ ಗಳಿಸುತ್ತಿದ್ದರೆ, ಜಿಂಬಾಬ್ವೆ  ತಂಡಕ್ಕೆ ಹೊಸ ಶೂ ಕೊಡಿಸಲು ಕೂಡ ಜಿಂಬಾಬ್ವೆ ಕ್ರಿಕೆಟ್‌ ಮಂಡಳಿಗೆ ಸಾಧ್ಯವಾಗದೇ ಇರುವುದು ಬಹುದೊಡ್ಡ ವಿಪರ್ಯಾಸವೇ ಸರಿ.  

ಜಿಂಬಾಬ್ವೆ 1983ರ ವಿಶ್ವಕಪ್‌ಗೆ ಸ್ವಲ್ಪ ಮೊದಲು ಏಕದಿನ ಪಂದ್ಯ ಆಡಲು ಮತ್ತು 1992ರಲ್ಲಿ ಟೆಸ್ಟ್‌ ಆಡುವ ತಂಡವಾಗಿ ಮಾನ್ಯತೆ ಪಡೆದಿತ್ತು. ಆದರೆ ದೀರ್ಘಕಾಲದಿಂದ ಆ ದೇಶದ ಕ್ರಿಕೆಟ್‌ ಮಂಡಳಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಇದರಿಂದ ದೇಶದ ಕ್ರಿಕೆಟ್ ಬೆಳವಣಿಗೆಗೂ ತೀವ್ರ ಅಡ್ಡಿಯಾಗಿದೆ. ಇದೇ  ತಂಡದಲ್ಲಿ ಈ ಹಿಂದೆ, ಫ್ಲವರ್‌ ಸೋದರರು (ಆ್ಯಂಡಿ ಮತ್ತು ಗ್ರ್ಯಾಂಟ್‌), ಆಲಿಸ್ಟರ್‌ ಕ್ಯಾಂಪ್‌ಬೆಲ್‌, ಡೇವ್ ಹಾಟನ್‌, ಹೀತ್‌ ಸ್ಟ್ರೀಕ್‌ ಮತ್ತು ನೀಲ್‌ ಜಾನ್ಸನ್‌ ಮೊದಲಾದ ಹೆಸರಾಂತ ಆಟಗಾರರಿದ್ದು, ಆಫ್ರಿಕ ಖಂಡದ ಈ ರಾಷ್ಟ್ರ ತಕ್ಕಮಟ್ಟಿಗೆ ಯಶಸ್ಸನ್ನು ಕೂಡ ಕಂಡಿತ್ತು.

ಆದರೆ ಕ್ರಿಕೆಟ್ ನಲ್ಲಿ ಅಲ್ಲಿನ ಸರ್ಕಾರದ ಹಸ್ತಕ್ಷೇಪದಿಂದಾಗಿ, ಐಸಿಸಿ 2019ರಲ್ಲಿ ಜಿಂಬಾಬ್ವೆಯ ಕ್ರಿಕೆಟ್‌ ಮಂಡಳಿಯನ್ನು ಅಮಾನತಿನಲ್ಲಿರಿಸಿತ್ತು. ಕಳೆದ ವರ್ಷ ಟಿ–20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಡುವುದಕ್ಕೂ ಅವಕಾಶ ಕೊಟ್ಟಿರಲಿಲ್ಲ. ಆದರೆ ನಂತರ ಈ  ನಿರ್ಬಂಧ ತೆರವು ಮಾಡಲಾಯಿತು. ಇನ್ನು ಇತ್ತೀಚೆಗೆ ಪಾಕಿಸ್ತಾನ ತಂಡ ಇತ್ತೀಚಿನ ಜಿಂಬಾಬ್ವೆ ಪ್ರವಾಸದಲ್ಲಿ ಟೆಸ್ಟ್‌ ಸರಣಿಯನ್ನು 2–0 ಯಿಂದ ಕ್ಲೀನ್‌ ಸ್ವೀಪ್‌ ಮಾಡಿತ್ತು. ಏಕದಿನ ಸರಣಿಯನ್ನು 2–1 ರಿಂದ ಜಯಿಸಿತ್ತು. 

SCROLL FOR NEXT