ಕ್ರಿಕೆಟ್

4 ಕ್ರಿಕೆಟಿಗರಿಗೆ ಕೋವಿಡ್ ಸೋಂಕು: ಟಿ20 ತಂಡದಿಂದ ಹೊರಕ್ಕೆ!

Srinivasamurthy VN

ಮುಂಬೈ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ (SMAT)ಗೂ ಕೋವಿಡ್-19 ಆಂತಕ ಮೂಡಿದ್ದು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ 4 ಕ್ರಿಕೆಟಿಗರು ಸೋಂಕಿಗೆ ತುತ್ತಾಗಿ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಮುಂಬೈ ಹಿರಿಯರ ತಂಡದ ನಾಲ್ಕು ಆಟಗಾರರು ಸೋಂಕಿಗೆ ತುತ್ತಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಬೈ ವಿಮಾನ ನಿಲ್ದಾಣಕ್ಕೆ ಆಗಮಸಿದ್ದಾಗ ಆಟಗಾರರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ 4 ಆಟಗಾರರು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಫರಾಜ್ ಖಾನ್, ಪ್ರಶಾಂತ್ ಸೋಲಂಕಿ, ಶಮ್ಸ್ ಮುಲಾನಿ ಮತ್ತು ಸಾಯಿರಾಜ್ ಪಾಟೀಲ್ ಅವರು ಸೋಂಕಿಗೆ ತುತ್ತಾಗಿದ್ದು, ಅವರ ಸಂಪರ್ಕದಲ್ಲಿದ್ದವರಿಗೂ 7 ಐಸೊಲೇಷನ್ ನಲ್ಲಿರುವಂತೆ ಸೂಚಿಸಲಾಗಿದೆ. ಪ್ರಸ್ತುತ ಸೋಂಕಿಗೆ ತುತ್ತಾದವರನ್ನು ತಂಡದಿಂದ ಕೈ ಬಿಡಲಾಗಿದ್ದು ಅವರ ಸ್ಥಾನಕ್ಕೆ ಬೇರೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಎಂಸಿಎ (ಮುಂಬೈ ಕ್ರಿಕೆಟ್ ಅಸೋಸಿಯೇಷನ್)ಮಾಹಿತಿ ನೀಡಿದೆ. 

ಗುವಾಹತಿಯಲ್ಲಿ ನಡೆಯಲಿರುವ ಟೂರ್ನಿಗಾಗಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ ಪ್ರಯಾಣ ಬೆಳೆಸಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ವೇಳೆ ಆಟಗಾರರು ಸೋಂಕಿಗೆ ತುತ್ತಾಗಿದ್ದರಿಂದ ಅವರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.

SMAT ಟೂರ್ನಿ ನವೆಂಬರ್ 4 ರಿಂದ ಆರಂಭವಾಗಲಿದ್ದು, ಲಖನೌ,  ಬರೋಡಾ, ದೆಹಲಿ, ವಿಜಯವಾಡ ಮತ್ತು ಹರಿಯಾಣ ಮತ್ತು ಗುವಾಹಟಿಯಲ್ಲಿ ಪಂದ್ಯಗಳು ನಡೆಯಲಿದೆ. ಆಟಗಾರರು ಐದು ದಿನಗಳ ಪೂರ್ವ-ಟೂರ್ನಮೆಂಟ್ ಕ್ವಾರಂಟೈನ್‌ಗೆ ಒಳಗಾಗಲು ಒಂದು ವಾರದ ಮೊದಲು ಅಲ್ಲಿಗೆ ತೆರಳಬೇಕಿದೆ. 
 

SCROLL FOR NEXT