ಕ್ರಿಕೆಟ್

5ನೇ ಟೆಸ್ಟ್ ರದ್ದು: ಐಸಿಸಿಗೆ ಪತ್ರ ಬರೆದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ

Lingaraj Badiger

ಲಂಡನ್: ರದ್ದಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಿರ್ಧರಿಸುವಂತೆ ಕೋರಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ(ಐಸಿಸಿ) ಅಧಿಕೃತವಾಗಿ ಪತ್ರ ಬರೆದಿದೆ.

"ಹೌದು ನಾವು ಐಸಿಸಿಗೆ ಪತ್ರ ಬರೆದಿದ್ದೇವೆ" ಎಂದು ಇಸಿಬಿ ವಕ್ತಾರರು ಐದನೇ ಟೆಸ್ಟ್ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಬೇಕು ಎಂದು ಬಯಸುತ್ತೀರಾ ಎಂದು ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ಕೊನೆಯ ಟೆಸ್ಟ್ ಅನ್ನು ಶುಕ್ರವಾರ ಆರಂಭಕ್ಕೆ ಮೂರು ಗಂಟೆಗಳ ಮೊದಲು ಭಾರತೀಯ ಶಿಬಿರದಲ್ಲಿ ಕೊರೋನಾ ಭಯದಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ, ಭಾರತ ತಂಡದ ಎರಡನೇ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಭಾರತೀಯ ಆಟಗಾರರ ಆರ್‌ಟಿ–ಪಿಸಿಆರ್ ವರದಿ ನೆಗೆಟಿವ್ ಬಂದರೂ ಕೋವಿಡ್ ಆತಂಕದಿಂದಾಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಅಂತಿಮ ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ಐಸಿಸಿ ತೀರ್ಪು ಕಲ್ಪಿಸಿದ್ದಲ್ಲಿ ಸರಣಿ 2-2ರಲ್ಲಿ ಸಮಬಲವಾಗಲಿದೆ. ಅಲ್ಲದೆ ಅಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್‌ಗೆ ಪಂದ್ಯದ ನಷ್ಟವನ್ನು 'ಕ್ಲೈಮ್' ಮಾಡುವ ಅವಕಾಶವಿರುತ್ತದೆ. ಅಂದರೆ ಬಿಸಿಸಿಐ ನಷ್ಟ ಭರಿಸಬೇಕಾಗುತ್ತದೆ. 

ವರದಿಯ ಪ್ರಕಾರ ಇಸಿಬಿಗೆ ಸರಿ ಸುಮಾರು 40 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಉಂಟಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಬಿಕ್ಕಟನ್ನು ಪರಿಹರಿಸಲು ಐಸಿಸಿಯ ವಿವಾದ ಇತ್ಯರ್ಥ ಸಮಿತಿಗೆ ಇಸಿಬಿಯು ಪತ್ರ ಬರೆದಿದೆ.

SCROLL FOR NEXT