ಕ್ರಿಕೆಟ್

ಮಹಿಳೆಯರ ಏಕದಿನ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ವಿರೋಚಿತ ಸೋಲು

Srinivasamurthy VN

ಮ್ಯಾಕೆ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ ಆಸಿಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಂತಿಮ ಹಂತದವರೆಗೂ ಹೋರಾಟ ನಡೆಸಿದರೂ ವಿರೋಚಿತ ಸೋಲು ಕಂಡಿದೆ.

ಆಸ್ಟ್ರೇಲಿಯಾದ ಮ್ಯಾಕೆಯ ಹರಪ್ ಪಾರ್ಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಜಯ ಗಳಿಸಿದೆ. ಪಂದ್ಯ ಗೆಲ್ಲುವುದರಲ್ಲಿದ್ದ ಭಾರತ ವನಿತೆಯರ ತಂಡ ಕೊನೆಯ ಎಸೆತದಲ್ಲಿ ಪಂದ್ಯ ಸೋತು ತೀವ್ರ ನಿರಾಸೆ ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಮಾಡಿದ ಭಾರತದ ಮಹಿಳೆಯರ ತಂಡ, ಸ್ಮೃತಿ ಮಂಧಾನ (86 ರನ್), ಶಫಾಲಿ ವರ್ಮಾ (22 ರನ್), ನಾಯಕಿ ಮಿಥಾಲಿ ರಾಜ್ (8 ರನ್), ಯಕ್ಷಿತ ಭಾಟಿಯಾ (3 ರನ್), ರಿಚಾ ಘೋಷ್ (44 ರನ್), ದೀಪ್ತಿ ಶರ್ಮಾ 23, ಪೂಜಾ ವಸ್ತ್ರಾಕರ್ 29, ಜೂಲನ್ ಗೋಸ್ವಾಮಿ 28 ರನ್‌ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನೊಂದಿಗೆ 50 ಓವರ್‌ಗೆ 7 ವಿಕೆಟ್ ಕಳೆದು 274 ರನ್ ಗಳಿಸಿತು.

ಈ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳೆಯರ ತಂಡ ಬೆತ್ ಮೂನಿ ಆಕರ್ಷಕ ಶತಕ (125 ರನ್), ಮೆಗ್ ಲ್ಯಾನಿಂಗ್ 6, ಎಲ್ಲಿಸ್ ಪೆರ್ರಿ 2, ಆಶ್ಲೇ ಗಾರ್ಡ್ನರ್ 12, ನಿಕೋಲ ಕೇರಿ 39 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 275 ರನ್ ಗಳಿಸಿತು. ಕೊನೇ ಎಸೆತಕ್ಕೆ ಆಸ್ಟ್ರೇಲಿಯಾ ಗೆಲ್ಲಲು 3 ರನ್ ಬೇಕಿತ್ತು. ಜೂಲನ್ ಗೋಸ್ವಾಮಿ ಕೊನೇ ಎಸೆತ ನೋ ಬಾಲ್ ಹಾಕಿದರು. ಗೋಸ್ವಾಮಿ ಓವರ್ ಪೂರ್ಣಗೊಳಿಸುವಾಗ ಆಸೀಸ್ 2 ರನ್ ಗಳಿಸಿ ಪಂದ್ಯ ಗೆದ್ದಿತು.

ಆ ಮೂಲಕ ಈ ಪಂದ್ಯ ಇನ್ನಿಂಗ್ಸ್ ಕೊನೆಯ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿತ್ತು.  ಭಾರತದ ಪರ ಜೂಲನ್ ಗೋಸ್ವಾಮಿ 1, ಮೇಘನಾ 1, ಪೂಜಾ ವಸ್ತ್ರಾಕರ್ 1, ದೀಪ್ತಿ ಶರ್ಮಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಆಕರ್ಷಕ ಶತಕ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಬೆತ್ ಮೂನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 

SCROLL FOR NEXT