ಕ್ರಿಕೆಟ್

ವಾತಾವರಣ ವೈಪರಿತ್ಯ: ದೇಶೀಯ ಕ್ರಿಕೆಟ್ ಟೂರ್ನಿ ಮುಂದೂಡುವಂತೆ ರಾಜ್ಯಗಳಿಗೆ ಬಿಸಿಸಿಐ ಸಲಹೆ 

Srinivasamurthy VN

ನವದೆಹಲಿ: ವಾತಾವರಣ ವೈಪರಿತ್ಯ ಹಿನ್ನಲೆಯಲ್ಲಿ ದೇಶೀಯ ಕ್ರಿಕೆಟ್ ಟೂರ್ನಿ ಮುಂದೂಡುವಂತೆ ರಾಜ್ಯ ಬೋರ್ಡ್ ಗಳಿಗೆ ಬಿಸಿಸಿಐ ಸಲಹೆ ನೀಡಿದೆ.

ಹೌದು.. ಪ್ರತೀಕೂಲ ವಾತಾವರಣದ ಪರಿಣಾಮ ದೇಶದಲ್ಲಿ ದೇಶೀಯ ಕ್ರಿಕೆಟ್ ಆರಂಭಕ್ಕೆ ಬ್ರೇಕ್ ಬಿದ್ದಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 12 ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ 7 ರಲ್ಲಿ ಅಂಡರ್ -19 ಪುರುಷರ ಮತ್ತು ಮಹಿಳೆಯರ ಸೀಮಿತ ಓವರ್‌ಗಳ ಮೊದಲ ಸುತ್ತಿನ ಪಂದ್ಯಾವಳಿಯನ್ನು ಆಯೋಜಿಸಿದ್ದು, ಪಂದ್ಯಾವಳಿಯ ಆರಂಭವನ್ನು ಸೆಪ್ಟೆಂಬರ್ 30 ರವರೆಗೆ ಮುಂದೂಡುವಂತೆ ಸೂಚಿಸಿದೆ.

ತವರಿನ ಪಂದ್ಯಗಳು ಮೂಲತಃ ಸೆಪ್ಟೆಂಬರ್ 28 ರಿಂದ ಆರಂಭವಾಗಬೇಕಿತ್ತು ಆದರೆ ದೇಶಾದ್ಯಂತ ಚಾಲ್ತಿಯಲ್ಲಿರುವ ಪ್ರತಿಕೂಲ ಹವಾಮಾನದಿಂದಾಗಿ ಟೂರ್ನಿ ಮುಂದೂಡಲ್ಪಟ್ಟಿದೆ. ಹೈದರಾಬಾದ್, ವಿಶಾಖಪಟ್ಟಣಂ, ಇಂದೋರ್, ಭುವನೇಶ್ವರ, ಸೂರತ್, ರಾಜ್‌ಕೋಟ್ ಮತ್ತು ನಾಗ್ಪುರದಲ್ಲಿ ನಡೆಯುತ್ತಿರುವ ಅಂಡರ್-19 ಬಾಲಕರ ವಿನೂ ಮಂಕಡ್ ಟ್ರೋಫಿ ಮತ್ತು ಅಂಡರ್ -19 ಬಾಲಕಿಯರ ಏಕದಿನ ಪಂದ್ಯಾವಳಿಯನ್ನು ಕೆಲವೆಡೆ ಮುಂದೂಡಲಾಗಿದೆ. ಅಹಮದಾಬಾದ್, ದೆಹಲಿ, ಮೊಹಾಲಿ, ಜೈಪುರ ಮತ್ತು ರಾಂಚಿಯಲ್ಲಿ ಪಂದ್ಯಗಳು ವೇಳಾಪಟ್ಟಿಯಂತೆ ಆರಂಭವಾಗುತ್ತವೆ. ಬಿಸಿಸಿಐ ಮತ್ತು ರಾಜ್ಯ ಸಂಘದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.

ದೇಶದ ಕೆಲವು ಭಾಗಗಳು, ವಿಶೇಷವಾಗಿ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಗುಲಾಬ್ ಚಂಡಮಾರುತದ ಪರಿಣಾಮ ಬೀರಿದೆ. ಬಿಸಿಸಿಐನ ಕ್ರೀಡಾ ಅಭಿವೃದ್ದಿಯ ಜನರಲ್ ಮ್ಯಾನೇಜರ್ ಧೀರಜ್ ಮಲ್ಹೋತ್ರಾ ಸೋಮವಾರ ಆತಿಥೇಯ ಕ್ರಿಕೆಟ್ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ, "ನಿರಂತರ ಮಳೆ ಮತ್ತು ಹವಾಮಾನ ಇಲಾಖೆ ನೀಡಿದ ಚಂಡಮಾರುತದ ಎಚ್ಚರಿಕೆಯ ಕಾರಣ, ಬಿಸಿಸಿಐ ಸೆಪ್ಟೆಂಬರ್ 28 ರಿಂದ ಗುಂಪು ಹಂತದ ಆರಂಭವನ್ನು ಮುಂದೂಡುವಂತೆ ಒತ್ತಾಯಿಸಲಾಗಿದೆ" ಎಂದು ತಿಳಿಸಲಾಗಿದೆ.
 

SCROLL FOR NEXT