ಕ್ರಿಕೆಟ್

2ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ, ಸರಣಿ ಕೈವಶ

Srinivasamurthy VN

ಹರಾರೆ: ಜಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ 162 ರನ್ ಗಳ ಸಾಧಾರಣ ಗುರಿಯನ್ನು ಟೀಂ ಇಂಡಿಯಾ ಕೇವಲ 25.4 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿ ಜಯ ಸಾಧಿಸಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ.

ಇದಕ್ಕೂ ಮೊದಲು ಟಾಸ್ ಗೆದ್ದರೂ ಜಿಂಬಾಬ್ವೆಯನ್ನು ಭಾರತ ಬ್ಯಾಟಿಂಗ್ ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 38.1 ಓವರ್ ನಲ್ಲಿ  161 ರನ್ ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ಸೀನ್ ವಿಲಿಯಮ್ಸ್ (42 ರನ್) ಮತ್ತು ರ್ಯಾನ್ ಬರ್ಲ್ (ಅಜಯೇ 39 ರನ್) ಬಿಟ್ಟರೆ ಉಳಿದಾವ ಬ್ಯಾಟರ್ ಕೂಡ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲುವ ಧೈರ್ಯ ಮಾಡಲಿಲ್ಲ. ಠಾಕೂರ್ ಬೌಲಿಂಗ್ ದಾಳಿಗೆ ಜಿಂಬಾಬ್ವೆ ಅಕ್ಷರಶಃ ತತ್ತರಿಸಿತು. ಅಂತಿಮವಾಗಿ 161 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಠಾಕೂರ್ 3 ವಿಕೆಟ್ ಪಡೆದು ಮಂಚಿದರೆ, ಸಿರಾಜ್, ಪ್ರಸಿದ್ ಕೃಷ್ಣ, ಅಕ್ಸರ್ ಪಟೇಲ್, ಕುಲದೀಪ್ ಯಾದವ್ ಮತ್ತು ದೀಪಕ್ ಹೂಡ ತಲಾ 1 ವಿಕೆಟ್ ಪಡೆದರು.

ಜಿಂಬಾಬ್ವೆ ನೀಡಿದ 162 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೂಡ ಆರಂಭಿಕ ಆಘಾತ ಎದುರಿಸಿತು. ಕೇವಲ 1ರನ್ ಗಳಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಎಲ್  ಬಿ ಬಲೆಗೆ ಬಿದ್ದರು. ಬಳಿಕ 33 ರನ್ ಗಳಿಸಿದ್ದ ಧವನ್ ಚಿವಂಗ ಬೌಲಿಂಗ್ ನಲ್ಲಿ ನಿರ್ಗಮಿಸಿದರೆ, ಕೇವಲ 6 ರನ್ ಗಳಿಗೆ ಇಶಾನ್ ಕಿಶನ್ ಜಾಂಗ್ವೆಗೆ ಎಲ್ ಬಿ ಬಲೆಗೆ ಬಿದ್ದರು. ಈ ಹಂತದಲ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತಿದ್ದ ಶುಭ್ ಮನ್ ಗಿಲ್ ಮತ್ತದೇ ಜಾಂಗ್ವೆ ಬೌಲಿಂಗ್ ನಲ್ಲಿ ಔಟಾದರು. ಬಳಿಕ ದೀಪಕ್ ಹೂಡಾ (25ರನ್) ಮತ್ತು ಸಂಜು ಸ್ಯಾಮ್ಸನ್ (ಅಜೇಯ 43) ಭಾರತದ ಗೆಲುವಿನ ಔಪಚಾರಿಕೆ ಮುಗಿಸುತ್ತಾರೆ ಎನ್ನುವಾಗಲೇ 25 ರನ್ ಗಳಿಸಿದ್ದ ಹೂಡಾ  ತಂಡದ ಮೊತ್ತ 153 ರನ್ ಗಳಾಗಿದ್ದಾಗ ರಾಜಾ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ಹಂತದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ 9 ರನ್ ಗಳ ಅಗತ್ಯ ಇತ್ತು.

ಬಳಿಕ ಸ್ಯಾಮ್ಸನ್ ಜೊತೆಗೂಡಿದ ಅಕ್ಸರ್ ಪಟೇಲ್ ಒಂದು ಬೌಂಡರಿ ಮೂಲಕ 6 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಗೆಲ್ಲಲು 1ರನ್ ಅಗತ್ಯವಿದ್ದ ಸಂದರ್ಭದಲ್ಲಿ 25ನೇ ಓವರ್ ನ ನಾಲ್ಕನೇ ಎಸೆತವನ್ನು ಸಿಕ್ಸರ್ ಅಟ್ಟುವ ಮೂಲಕ ಸ್ಯಾಮ್ಸನ್ ತಮ್ಮದೇ ಶೈಲಿಯಲ್ಲಿ ಪಂದ್ಯ ಮುಕ್ತಾಯಹಗೊಳಿಸಿದರು.

ಈ ಮೂಲಕ ಭಾರತದ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ.

SCROLL FOR NEXT