ಕ್ರಿಕೆಟ್

2ನೇ ಏಕದಿನ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾಗೆ ಗಾಯ, ಆಸ್ಪತ್ರೆಗೆ ದೌಡು!!

Srinivasamurthy VN

ಢಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಮತ್ತೊಂದು ಗಾಯದ ಸಮಸ್ಯೆ ಎದುರಾಗಿದ್ದು ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ.

ಇಂದು ಢಾಕಾದ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿದೆ. ಇನ್ನಿಂಗ್ಸ್ ನ 2ನೇ ಓವರ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಮಹಮದ್ ಸಿರಾಜ್ ಎಸೆದ 2ನೇ ಓವರ್ ವೇಳೆ ಲಿಟ್ಟನ್ ದಾಸ್ ಬ್ಯಾಟ್ ಸವರಿದ್ದ ಚೆಂಡು ನೇರವಾಗಿ ಸ್ಲಿಪ್ ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಕೈಗೆ ಹೋಯಿತು. ಆದರೆ ಚೆಂಡಿನ ವೇಗ ಅರಿಯುವಲ್ಲಿ ವಿಫಲರಾದ ರೋಹಿತ್ ಅದನ್ನು ಕ್ಯಾಚ್ ತೆಗೆದುಕೊಳ್ಳುವ ಭರದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. 

ಮೈದಾನದಲ್ಲೇ ಸಾಕಷ್ಟು ನೋವಿನಿಂದ ಒದ್ದಾಡಿದ ರೋಹಿತ್ ಶರ್ಮಾ ಬಳಿಕ ಪೆವಿಲಿಯನ್ ಗೆ ಮರಳಿ ಫಿಸಿಯೋ ಬಳಿ ಸಲಹೆ ಪಡೆದಿದ್ದಾರೆ. ಬಳಿಕ ಅವರನ್ನು ಸ್ಕಾನಿಂಗ್ ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬಿಸಿಸಿಐ ಮೂಲಗಳ ಪ್ರಕಾರ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. 

ಇನ್ನು ಪ್ರಸ್ತುತ ಪಂದ್ಯದಲ್ಲಿ ರೋಹಿತ್ ಗೆ ಬದಲಾಗಿ ತಂಡದ ರಜತ್ ಪಾಟಿದಾರ್ ಅವರನ್ನು ಬದಲಿಯಾಗಿ ಫೀಲ್ಡಿಂಗ್ ಗೆ ಇಳಿಸಲಾಗಿದೆ.
 

SCROLL FOR NEXT