ಕ್ರಿಕೆಟ್

ಅಸಾಧ್ಯ ಮಂಡಿನೋವಿಗೆ ಹಳ್ಳಿ ವೈದ್ಯನಿಂದ ಕೇವಲ 40 ರುಪಾಯಿಗೆ ಚಿಕಿತ್ಸೆ ಪಡೆದ ಧೋನಿ

Srinivasamurthy VN

ರಾಂಚಿ: ಹಲವು ದಿನಗಳಿಂದ ಬಾಧಿಸುತ್ತಿದ್ದ ಅಸಾಧ್ಯ ಮಂಡಿನೋವಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೇವಲ 40 ರೂ. ಗೆ ಚಿಕಿತ್ಸೆ ಪಡೆದು ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಎಂಎಸ್ ಧೋನಿ ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ನಿವೃತ್ತಿ  ಬಳಿಕವೂ ಸಾಕಷ್ಟು ಸಂಸ್ಥೆಗಳಿಗೆ ಅವರು ಪ್ರಚಾರ ರಾಯಭಾರಿಯಾಗಿದ್ದಾರೆ. ಈಗಲೂ ಧೋನಿ ಜಾರ್ಖಂಡ್‍ನ ಅತಿದೊಡ್ಡ ತೆರಿಗೆದಾರರಾಗಿದ್ದು, ಬಯಸಿದರೆ ಮಹೇಂದ್ರ ಸಿಂಗ್ ಧೋನಿ ವಿಶ್ವದ ಯಾವುದೇ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಇದೀಗ ಅವರು ಸ್ಥಳೀಯ ವೈದ್ಯರಿಂದ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ವ್ಯಾಪಕ ಸುದ್ದಿಯಾಗಿದ್ದಾರೆ.

ಹೌದು.. ಧೋನಿ ಅವರು ಕೆಲ ಸಮಯದಿಂದ ಎರಡೂ ಕಾಲುಗಳ ಮಂಡಿನೋವಿನಿಂದ ಬಳಲುತ್ತಿದ್ದರು. ಸಾಕಷ್ಟು ಆಸ್ಪತ್ರೆಗಳಿಗೆ ಅಲೆದರೂ ಅವರಿಗೆ ಶೇ.100ರಷ್ಟು ಪರಿಹಾರ ದೊರೆಯಲಿಲ್ಲ. ಆದರೆ ತಮ್ಮ ಪೋಷಕರು ಓರ್ವ ಹಳ್ಳಿಯೊಂದರ ನಾಟಿ ವೈದ್ಯನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಾಬಾ ಅವರು ನೀಡುವ ಔಷಧಿ ಅವರ ಕಾಯಿಲೆಯನ್ನು ಗುಣಪಡಿಸಿದೆ ಎಂದು ವೈದ್ಯರು ಹೇಳಿದರು. ಪೋಷಕರ ಯಶಸ್ವಿ ಚಿಕಿತ್ಸೆ ಬಳಿಕ ಧೋನಿ ಕೂಡ ಆ ವೈದ್ಯರ ಬಳಿಯಿಂದಲೇ ಔಷಧಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಈ ಚಿಕಿತ್ಸೆಯ ವೆಚ್ಚ ಎಷ್ಟು ಗೊತ್ತಾ.. 40 ರೂಗಳು.. ಹೌದು.. ಕೇವಲ 40 ರೂಗಳು ಮಾತ್ರ..

ಧೋನಿ ರಾಂಚಿಯ ಸ್ಥಳೀಯ ಹಳ್ಳಿ ಲ್ಯಾಂಪಂಗ್‍ನ ಸ್ಥಳೀಯ ವೈದ್ಯ ವಂದನ್ ಸಿಂಗ್ ಖೇರ್ವಾರ್ ಅವರಿಂದ ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾತನಾಡಿರುವ ನಾಟಿ ವೈದ್ಯ ವಂದನ್ ಸಿಂಗ್ ಖೇರ್ವಾರ್ ಧೋನಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದೆ. ಹೀಗಾಗಿ ಅವರಿಗೆ ಮಂಡಿನೋವು ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

ಎಂಎಸ್ ಧೋನಿ ಮೊದಲ ಬಾರಿಗೆ ಚಿಕಿತ್ಸೆಗಾಗಿ ತನ್ನ ಬಳಿಗೆ ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಧೋನಿ ಅವರ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ಔಷಧಿಗೆ 40 ರೂಪಾಯಿ ತೆಗೆದುಕೊಂಡೆ. ಅವರ ಕಾರನ್ನು ನೋಡಿ ಇಲ್ಲಿನ ಹುಡುಗರು ಅವರು ಧೋನಿ ಎಂದು ಹೇಳಿದ್ದರಿಂದ ನನಗೆ ಗೊತ್ತಾಯಿತು ಎಂದು ವೈದ್ಯರು ಹೇಳಿದರು.

ಇನ್ನು ಸ್ವತಃ ಎಂಎಸ್ ಧೋನಿ ಅವರೇ ಔಷಧಿ ತೆಗೆದುಕೊಂಡು ಬರಲು ರಾಂಚಿಯಿಂದ 70 ಕಿಲೋಮೀಟರ್ ಕಾರಿನಲ್ಲಿ ಕ್ರಮಿಸುತ್ತಾರೆ. ಅಲ್ಲದೆ ಅಲ್ಲಿ ಸಾಮಾನ್ಯನಂತೆ ಧೋನಿ ಮರದ ಕೆಳಗೆ ಕುಳಿತು ಔಷಧ ತೆಗೆದುಕೊಳ್ಳುತ್ತಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ. ಈ ವೇಳೆ ಧೋನಿ ತಮ್ಮ ಅಭಿಮಾನಿಗಳೊಂದಿಗೆ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಕೂಡ ಹರಿದಾಡುತ್ತಿವೆ.
 

SCROLL FOR NEXT