ಕ್ರಿಕೆಟ್

'ಕಠಿಣ ಸಮಯ ಕೂಡ ಕಳೆದು ಹೋಗುತ್ತದೆ': ವಿರಾಟ್ ಕೊಹ್ಲಿಗೆ ಪಾಕ್ ನಾಯಕ ಬಾಬರ್ ಆಜಮ್ ಪಾಸಿಟಿವ್ ಸಂದೇಶ

Srinivasamurthy VN

ನವದೆಹಲಿ: ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ವಿಫಲವಾಗಿದ್ದು, ಇದು ಟೀಕಾಕಾರರಿಗೆ ಆಹಾರವಾಗಿದೆ. ಇದರ ನಡುವೆಯೇ ವಿರಾಟ್ ಕೊಹ್ಲಿ ಅವರ ಬೆನ್ನಿಗೆ ನಿಂತ ಪಾಕಿಸ್ತಾನ ತಂಡ ನಾಯಕ ಬಾಬರ್ ಆಜಮ್ ಆಡಿರುವ ಮಾತುಗಳು ಇದೀಗ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

ಹೌದು..  ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಹಾಲಿ ನಾಯಕ ಬಾಬರ್ ಅಜಂ ಈ ಇಬ್ಬರು ಆಟಗಾರರು ಆಧುನಿಕ ಕ್ರಿಕೆಟ್‌ ಸೂಪರ್‌ ಸ್ಟಾರ್ ಬ್ಯಾಟರ್‌ಗಳು ಎನಿಸಿಕೊಂಡಿದ್ದಾರೆ. ಈ ಇಬ್ಬರು ಆಟಗಾರರ ನಡುವೆ ಮೈದಾನದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುವುದನ್ನು ಕ್ರಿಕೆಟ್ ಅಭಿಮಾನಿಗಳು ನೋಡಿದ್ದಾರೆ. ಆದರೆ ಸದ್ಯ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದು, ಕಳೆದೆರಡು ಮೂರು ವರ್ಷಗಳಿಂದ ದೊಡ್ಡ ಮೊತ್ತ ಕಲೆಹಾಕಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಇದೀಗ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಭಾರತದಲ್ಲಿ ಸಾಕಷ್ಟು ವಿಮರ್ಶೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ಬ್ಯಾಟಿಂಗ್ ವೈಫಲ್ಯವೂ ಕಾರಣವಾಗಿದೆ.

ಇಂತಹ ಹೊತ್ತಿನಲ್ಲೇ ನೆರೆಯ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೊಹ್ಲಿ ಕುರಿತು ಸ್ಪೂರ್ತಿಯ ಮಾತುಗಳನ್ನಾಡುವ ಮೂಲಕ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. 

ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಕಟ್ಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊಹ್ಲಿ 25 ಎಸೆತಗಳಲ್ಲಿ 16 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಅಜಂ, ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಜತೆಯಾಗಿ ಇರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂಕಷ್ಟದ ಕಾಲ ಕಳೆದು ಹೋಗುತ್ತದೆ ಧೈರ್ಯವಾಗಿರಿ ಎಂದು ಸಲಹೆ ನೀಡಿದ್ದಾರೆ. 

'ಸದೃಢವಾಗಿರಿ, ಈ ಸಮಯ ಕೂಡಾ ಕಳೆದುಹೋಗುತ್ತದೆ ಎಂದು ಬಾಬರ್ ಅಜಂ ಟ್ವೀಟ್ ಮಾಡಿ ಧೈರ್ಯ ತುಂಬಿದ್ದಾರೆ. ಬಾಬರ್ ಆಜಮ್ ರ ಈ ಟ್ವೀಟ್ ಕ್ರಿಕೆಟ್ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

SCROLL FOR NEXT