ಕ್ರಿಕೆಟ್

ಟಿ20 ವಿಶ್ವಕಪ್: ವಿಶ್ವದಾಖಲೆ ನಿರ್ಮಿಸಿದ ಭಾರತದ ವಿರಾಟ್ ಕೊಹ್ಲಿ, ಗರಿಷ್ಠ ರನ್ ಸರದಾರ!

Srinivasamurthy VN

ಅಡಿಲೇಡ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ  ಬೌಂಡರಿಗಳ ನೆರವಿನಿಂದ ಅಜೇಯ 64 ರನ್ ಕಲೆಹಾಕಿದರು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರ ಹೆಸರಿನಲ್ಲಿತ್ತು. ಜಯವರ್ಧನೆ 23 ಇನ್ನಿಂಗ್ಸ್ ಗಳಲ್ಲಿ 1016 ರನ್ ಗಳಿಸಿ ಆಗ್ರಸ್ಥಾನಿಯಾಗಿದ್ದರು.

ಆದರೆ ಇದೀಗ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿಗೆ ದಾಖಲಾಗಿದ್ದು, ಕೊಹ್ಲಿ ಇಂದಿನ ಅಜೇಯ 64 ರನ್ ಸೇರಿದಂತೆ ಟಿ20 ವಿಶ್ವಕಪ್ ನಲ್ಲಿ ಈ ವರೆಗೂ ತಮ್ಮ ರನ್ ಗಳಿಕೆಯನ್ನು 1065ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಈ ದಾಖಲೆಗಾಗಿ ಕೊಹ್ಲಿ 25 ಪಂದ್ಯಗಳಿಂದ 23 ಇನ್ನಿಂಗ್ಸ್ ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ಕೊಹ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ವರ್ಷದ ವಿಶ್ವಕರ್ ಟೂರ್ನಿಯಲ್ಲಿ 220 ರನ್ ಗಳಿಸುವ ಮೂಲಕ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದು, ಅವರು 2022 ರಲ್ಲಿ T20I ಗಳಲ್ಲಿ ಒಟ್ಟು 700 ರನ್‌ ಗಳಿಸಿದ್ದಾರೆ. ಈ ವರ್ಷದ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಕೊಹ್ಲಿಗಿಂತ ಹಿಂದಿದ್ದಾರೆ.    

ಇನ್ನು 1016 ರನ್ ಕಲೆಹಾಕಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಇದೀಗ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು,  965 ರನ್ ಕಲೆಹಾಕಿರುವ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್  3ನೇ ಸ್ಥಾನದಲ್ಲಿದ್ದಾರೆ. 904 ರನ್ ಗಳನ್ನು ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
 

SCROLL FOR NEXT