ಕ್ರಿಕೆಟ್

ಐಪಿಎಸ್ ಅಧಿಕಾರಿ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ ಎಂ.ಎಸ್.ಧೋನಿ

Manjula VN

ಚೆನ್ನೈ: ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ವಿರುದ್ಧ ಮದ್ರಾಸ್ ಹೈಕೋರ್ಟ್‍ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಕ್ರಿಮಿನಲ್ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್ ವಿರುದ್ಧ ಐಪಿಎಸ್ ಅಧಿಕಾರಿ ವ್ಯಕ್ತಪಡಿಸಿದ್ದಾರೆ ಎನ್ನಲಾದ ಅಭಿಪ್ರಾಯವನ್ನು ವಿರೋಧಿಸಿ ಧೋನಿಯವರು ಈ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಧೋನಿ ವಿರುದ್ಧ ಮ್ಯಾಚ್‍ಫಿಕ್ಸಿಂಗ್ ಆರೋಪ ಮಾಡಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಮತ್ತು ಝೀ ಮೀಡಿಯಾ ಕಾರ್ಪೊರೇಷನ್ ವಿರುದ್ಧ 100 ಕೋಟಿ ರೂ. ಪರಿಹಾರ ನೀಡುವಂತೆ ಕೋರಲಾಗಿದೆ.

ತಮಿಳುನಾಡಿನ ಅಡ್ವೊಕೇಟ್ ಜನರಲ್ ಆರ್.ಷಣ್ಮುಗ ಸುಂದರಂ ಅವರು ಅಪರಾಧ ನ್ಯಾಯಾಲಯ ನಿಂದನೆ ಪ್ರಕರಣ ಮುಂದುವರಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಪಿ.ಎನ್.ಪ್ರಕಾಶ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ಶುಕ್ರವಾರ ಪ್ರಕರಣದ ವಿಚಾರಣೆ ನಡೆದಿಲ್ಲ. ಮುಂದಿನ ಮಂಗಳವಾರಕ್ಕೆ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ.

ಸಂಪತ್ ಕುಮಾರ್ 2021ರ ಡಿಸೆಂಬರ್ 17ರಂದು ಸಲ್ಲಿಸಿದ ಹೆಚ್ಚುವರಿ ಲಿಖಿತ ಹೇಳಿಕೆಯಲ್ಲಿ ದೇಶದ ಅತ್ಯುನ್ನತ ಕೋರ್ಟ್ ಹಾಗೂ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವುದು ಧೋನಿಯವರ ಆರೋಪವಾಗಿದೆ.

SCROLL FOR NEXT