ಕ್ರಿಕೆಟ್

ಟಿ20 ವಿಶ್ವಕಪ್ ನಲ್ಲಿ ಗರಿಷ್ಠ ರನ್: ಕ್ರಿಸ್ ಗೇಯ್ಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Srinivasamurthy VN

ಸಿಡ್ನಿ: ಟಿ20 ವಿಶ್ವಕಪ್ ನ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಕ್ರಿಸ್ ಗೇಯ್ಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಹೌದು.. ನೆದರ್ಲೆಂಡ್ ವಿರುದ್ಧ ಇಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ರ 2ನೇ ಪಂದ್ಯದಲ್ಲಿ ಭಾರತ 179 ರನ್ ಗಳನ್ನು ಪೇರಿಸಿದೆ.

ಈ ಮೊತ್ತದಲ್ಲಿ ವಿರಾಟ್ ಕೊಹ್ಲಿಯದ್ದು ಸಿಂಹಪಾಲಿದ್ದು, ಕೊಹ್ಲಿ ಕೇವಲ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ಅಜೇಯ 62 ರನ್ ಕಲೆಹಾಕಿದರು. ಅಂತೆಯೇ ಟೂರ್ನಿಯಲ್ಲಿ ತಮ್ಮ ಸತತ 2 ಅರ್ಧಶತಕ ಸಿಡಿಸಿದರು. 

ಅಲ್ಲದೇ ಇದೇ ಇನ್ನಿಂಗ್ಸ್ ಮೂಲಕ ಕೊಹ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ದಾಖಲೆಯನ್ನು ಕೂಡ ಹಿಂದಿಕ್ಕಿದ್ದು ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಗರಿಷ್ಛ ರನ್ ಕಲೆಹಾಕಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಒಟ್ಟು 989 ರನ್ ಗಳಿಸಿದ್ದು, 965 ರನ್ ಕಲೆಹಾಕಿರುವ ಕ್ರಿಸ್ ಗೇಯ್ಲ್ ರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.

ಇನ್ನು 1016 ರನ್ ಕಲೆಹಾಕಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಅಗ್ರ ಸ್ಥಾನದಲ್ಲಿದ್ದಾರೆ. 904 ರನ್ ಗಳನ್ನು ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

SCROLL FOR NEXT