ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ತಂಡಕ್ಕೆ ಉಮೇಶ್, ಶ್ರೇಯಸ್ ಅಯ್ಯರ್, ಶಹಬಾಜ್ ಸೇರ್ಪಡೆ!

Srinivasamurthy VN

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡ ಪ್ರಕಟ ಮಾಡಲಾಗಿದ್ದು, ವೇಗಿ ಉಮೇಶ್ ಯಾದವ್, ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ಶಹಬಾಜ್ ಅಹ್ಮದ್ ತಂಡ ಸೇರಿಕೊಂಡಿದ್ದಾರೆ.

ನೂತನ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದ್ದು, ಬೆನ್ನುನೋವಿನಿಂದ ಬಳಲುತ್ತಿರುವ ದೀಪಕ್ ಹೂಡಾ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಆಲ್ ರೌಂಡರ್ ತನ್ನ ಗಾಯದ ಹೆಚ್ಚಿನ ನಿರ್ವಹಣೆಗಾಗಿ NCA ನಲ್ಲಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಕೂಡ ಕಂಡೀಷನಿಂಗ್ (ದೈಹಿಕ ಸಾಮರ್ಥ್ಯ ತರಬೇತಿ) ಸಂಬಂಧಿತ ಕೆಲಸಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇನ್ನು ಅರ್ಷ್‌ದೀಪ್ ಸಿಂಗ್ ತಿರುವನಂತಪುರದಲ್ಲಿ ತಂಡದೊಂದಿಗಿದ್ದು, ವೇಗಿ ಮೊಹಮ್ಮದ್ ಶಮಿ ಇನ್ನೂ COVID-19 ನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಮೂರು ಪಂದ್ಯಗಳ T20I ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಶಮಿ ಬದಲಿಗೆ ಉಮೇಶ್ ಯಾದವ್ ಮತ್ತು ಹೂಡಾ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಹೆಸರಿಸಿದೆ. ಶಹಬಾಜ್ ಅಹ್ಮದ್ ಕೂಡ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಟಿ20 ಸರಣಿ ಬುಧವಾರ ಕೇರಳದಲ್ಲಿ ಮೊದಲ ಟಿ20 ಪಂದ್ಯದೊಂದಿಗೆ ಆರಂಭವಾಗಲಿದೆ. ಅದರ ನಂತರ ಅಕ್ಟೋಬರ್ 2 ಮತ್ತು 4 ರಂದು ಇನ್ನೂ ಎರಡು ಪಂದ್ಯಗಳು ನಡೆಯಲಿವೆ. ಇದಾದ ನಂತರ, ಅಕ್ಟೋಬರ್ 6 ರಿಂದ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಭಾರತ ತಂಡ: 
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಶಹಬಾಜ್ ಅಹ್ಮದ್.
 

SCROLL FOR NEXT