ಕ್ರಿಕೆಟ್

ಮೊದಲ ಟೆಸ್ಟ್; 2ನೇ ದಿನದಾಟದ ಅಂತ್ಯಕ್ಕೆ ದ.ಆಫ್ರಿಕಾ 256/5, ಭಾರತ ವಿರುದ್ದ 11 ರನ್ ಮುನ್ನಡೆ

Srinivasamurthy VN

ಸೆಂಚೂರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದ್ದು, ಭಾರತದ ವಿರುದ್ಧ 11 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.

ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಭಾರತ ತಂಡ ಕೆಎಲ್ ರಾಹುಲ್ ಶತಕದ ನೆರವಿನಿಂದ 245ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಡೀನ್ ಎಲ್ಗಾರ್ (ಅಜೇಯ 140ರನ್)ಅಮೋಘ ಶತಕ ಹಾಗೂ ಡೇವಿಡ್ ಬೆಡಿಂಗ್ಹ್ಯಾಮ್ (56 ರನ್) ಅರ್ಧಶತಕದ ನೆರವಿನಿಂದ 256 ರನ್ ಗಳಿಸಿದೆ. 

ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾಗೆ ಭಾರತದ ವೇಗಿ ಮಹಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಆಫ್ರಿಕಾದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಕೇವಲ 5ರನ್ ಗಳಿಗೆ ಕೆಎಲ್ ರಾಹುಲ್ ಗೆ ಕ್ಯಾಚಿತ್ತು ಔಟಾದರು. ಬಳಿಕ ಟೋನಿ ಡಿ ಜೋರ್ಜಿ ಕೂಡ 28 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಎಲ್ಗಾರ್ ಉತ್ತಮ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು.

ಈ ಹಂತದಲ್ಲಿ ಕೀಗನ್ ಪೀಟರ್ಸನ್ ಕೇವಲ 2ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಕೈಲ್ ವೆರ್ರೆನ್ನೆ 4 ರನ್ ಗಳಿಸಿ ದಿನದಾಟದ ಅಂತಿಮ ಹಂತದಲ್ಲಿ ವಿಕೆಟ್ ಕೈ ಚೆಲ್ಲಿದರು. ಈ ಹೊತ್ತಿಗಾಗಲೇ ಎಲ್ಗಾರ್ ಶತಕ ಸಿಡಿಸಿದ್ದರು.

ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ದ.ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿ ಭಾರತದ ವಿರುದ್ಧ 11 ರನ್ ಗಳ ಮುನ್ನಡೆ ಸಾಧಿಸಿದೆ.
 

SCROLL FOR NEXT