ಪೊಟ್ಚೆಫ್‌ಸ್ಟ್ರೋಮ್: ದಕ್ಷಿಣ ಆಫ್ರಿಕಾದ ಸೆನ್ ವೆಸ್ ಪಾರ್ಕ್ ನಲ್ಲಿ ನಡೆದ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಗಳಿಂದ ಭಾರತ ಗೆಲುವು ಸಾಧಿಸಿದೆ. ಆರಂಭಿಕ ಆಟಗಾರ್ತಿ ಶ್ವೇತಾ ಶೆರಾವತ್ ಅವರ ಆಕರ್ಷಕ ಅರ್ಧ ಶತಕ ಹಾಗೂ ಪಾರ್ಶವಿ ಅವರ ಮೂರು ವಿಕೆಟ್ ಗಳ ನೆರವಿನಿಂದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿತು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಂತರ ಪಾರ್ಶವಿ ಅವರ ಶಿಸ್ತಿನ ಬೌಲಿಂಗ್ ಪ್ರಯತ್ನದಿಂದ (3/20) ಭಾರತವು ನ್ಯೂಜಿಲೆಂಡ್ ತಂಡವನ್ನು ಒಂಬತ್ತು ವಿಕೆಟ್ ನಷ್ಟಕ್ಕೆ 107 ರನ್ ಗಳಿಗೆ ಕಟ್ಟಿ ಹಾಕಿತು.
16ರ ಹರೆಯದ ಲೆಗ್ ಸ್ಪಿನ್ನರ್ ಪಾರ್ಶವಿ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದು ಸತತ ಮೂರು ವಿಕೆಟ್ ಕಿತ್ತರೆ, ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಶಫಾಲಿ ಮತ್ತು ಅರ್ಚನಾ ದೇವಿ ತಲಾ ಒಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಪರ ಜಾರ್ಜಿಯಾ ಪ್ಲಿಮ್ಮರ್ (35) ಇಸಾಬೆಲ್ಲಾ ಗೇಜ್ (26) ಮತ್ತು ಇಜ್ಜಿ ಶಾರ್ಪ್ (13) ಮತ್ತು ಕೇಲಿ ನೈಟ್ (12) ರನ್ ಕಲೆಹಾಕುವುದರೊಂದಿಗೆ ಎರಡಂಕಿ ತಲುಪಲು ಪರದಾಡಿದರು.
ನ್ಯೂಜಿಲೆಂಡ್ ನೀಡಿದ 108 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡ 14.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸುವ ಮೂಲಕ ವಿಜಯದ ನಗೆ ಬೀರಿತು. ಮೂರು ವಿಕೆಟ್‌ಗಳ ಸಾಧನೆಗಾಗಿ ಪಾರ್ಶವಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಇನ್ನೊಂದು ಸೆಮಿಫೈನಲ್‌ನಲ್ಲಿ ಗೆದ್ದ ತಂಡವನ್ನು ಭಾರತ ಎದುರಿಸಲಿದೆ.
ಸಂಕ್ಷಿಪ್ತ ಅಂಕಗಳು:
ನ್ಯೂಜಿಲೆಂಡ್ ಮಹಿಳಾ ತಂಡ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 107 (ಜಾರ್ಜಿಯಾ ಪ್ಲಿಮ್ಮರ್ 35; ಪಾರ್ಶವಿ ಚೋಪ್ರಾ 3/20).
ಭಾರತ ಮಹಿಳಾ ತಂಡ: 14 ಓವರ್ ಗಳ್ಲಲಿ 2 ವಿಕೆಟ್ ನಷ್ಟಕ್ಕೆ 110