ನವದೆಹಲಿ: ಏಷ್ಯಾಕಪ್ ಬಿಕ್ಕಟ್ಟು ಕೊನೆಗೊಂಡಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023 ಟೂರ್ನಿಯಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. ಕರಡು ವೇಳಾಪಟ್ಟಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಸ್ಪರ್ಧೆ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಆದರೆ, ಇದೀಗ ಪಾಕಿಸ್ತಾನ ತಂಡ ಬೆಂಗಳೂರು ಮತ್ತು ಚೆನ್ನೈನಲ್ಲಿ ಪಂದ್ಯವನ್ನಾಡಲು ಇಷ್ಟಪಡುತ್ತಿಲ್ಲ. ಇಲ್ಲಿ ನಿಗದಿ ಮಾಡಿರುವ ಪಂದ್ಯಗಳಲ್ಲಿ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಹಾಗೂ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಆಡಬೇಕಾಗಿದೆ. ಚೆನ್ನೈನ ಪಿಚ್ ಹೆಚ್ಚು ಸ್ಪಿನ್ ಬೌಲರ್‌ಗಳಿಗೆ ನೆರವಾಗುತ್ತದೆ. ಅಫ್ಘಾನಿಸ್ತಾನ ತಂಡ ರಶೀದ್ ಖಾನ್, ನೂರ್ ಅಹ್ಮದ್ ಸೇರಿದಂತೆ ಕೆಲವು ಗುಣಮಟ್ಟದ ಸ್ಪಿನ್ನರ್ಗಳನ್ನು ಹೊಂದಿದೆ. ಹೀಗಾಗಿ ಚೆನ್ನೈನಲ್ಲಿ ನಿಗದಿಪಡಿಸಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವಂತೆ ಪಾಕ್ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಏಷ್ಯಾ ಕಪ್ 2023: ಹೈಬ್ರಿಡ್ ಮಾಡೆಲ್ ವೇಳಾಪಟ್ಟಿ ಪ್ರಕಟ; ಪಾಕ್ ನಲ್ಲಿ 4, ಲಂಕಾ ನೆಲದಲ್ಲಿ 9 ಪಂದ್ಯ ಆಯೋಜನೆ
ಬೆಂಗಳೂರು ಪಿಚ್ ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿದಂತಾಗಿದೆ.ಹಾಗಾಗೀ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳ ಸ್ಥಳ ಬದಲಾವಣೆಗೆ ಪಿಸಿಬಿ ವಿನಂತಿಸಿರುವುದಾಗಿ ತಿಳಿದುಬಂದಿದೆ. ಆದಾಗ್ಯೂ ಐಸಿಸಿ ಶಿಷ್ಟಾಚಾರದ ಭಾಗವಾಗಿ ಸದಸ್ಯ ಮಂಡಳಿಗಳಿಂದ ಪಿಸಿಸಿಐ ಸಲಹೆ ಕೇಳಿದೆ ಆದರೆ, ಸ್ಥಳಗಳನ್ನು ಬದಲಾಯಿಸಲು ಬಲವಾದ ಕಾರಣವಿರಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.