ಕ್ರಿಕೆಟ್

ಬಾರ್ಡರ್-ಗವಾಸ್ಕರ್ ಟ್ರೋಫಿ: 4ನೇ ಟೆಸ್ಟ್ ಪಂದ್ಯಕ್ಕೂ ಸ್ಟೀವ್ ಸ್ಮಿತ್ ನಾಯಕ- ಕ್ರಿಕೆಟ್ ಆಸ್ಟ್ರೇಲಿಯಾ

Srinivasamurthy VN

ಅಹ್ಮದಾಬಾದ್: ಟೀಂ ಇಂಡಿಯಾ ವಿರುದ್ಧದ ಬಾರ್ಡರ್‌–ಗಾವಸ್ಕರ್‌ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಸ್ಟೀವ್‌ ಸ್ಮಿತ್‌ ಅವರೇ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

ಹೌದು.. ಆತಿಥೇಯ ಭಾರತದ ವಿರುದ್ಧ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯಕ್ಕೂ ಸ್ಟೀವ್‌ ಸ್ಮಿತ್‌ ಅವರೇ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕ ಪ್ಯಾಟ್‌ ಕಮಿನ್ಸ್‌ ಅವರು ತಮ್ಮ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ವಾಪಸ್‌ ಆಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ಪ್ಯಾಟ್ ಕಮಿನ್ಸ್‌, ಬಳಿಕ ತಮ್ಮ ತಾಯಿಯ ಅನಾರೋಗ್ಯದ ಹಿನ್ನಲೆಯಲ್ಲಿ ತವರಿಗೆ ಮರಳಿದ್ದರು. ಆ ಎರಡೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿತ್ತು. ಬಳಿಕ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ತಂಡದ ಹೊಣೆಯನ್ನು ಸ್ಮಿತ್‌ ವಹಿಸಲಾಗಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಈಗಲೂ ಕಮಿನ್ಸ್ ಬ್ರೆಸ್ಟ್ ಕ್ಯಾನ್ಸರ್ ಗೆ ತುತ್ತಾಗಿರುವ ತಾಯಿ ಮಾರಿಯಾ ಅವರ ಮೇಲ್ವಿಚಾರಣೆಯಲ್ಲಿ ಇದ್ದು ಭಾರತಕ್ಕೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಮುಂದಿನ ಪಂದ್ಯಕ್ಕೂ ಸ್ಟೀವ್ ಸ್ಮಿತ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಕಮಿನ್ಸ್‌ ಸಿಡ್ನಿಯಲ್ಲಿಯೇ ಉಳಿಯಲಿದ್ದಾರೆ ಎಂದು Cricket.com.au ವೆಬ್‌ಸೈಟ್‌ ವರದಿ ಮಾಡಿದೆ. ಅಹಮದಾಬಾದ್‌ನಲ್ಲಿ ನಡೆಯುವ ಅಂತಿಮ ಟೆಸ್ಟ್‌ ಬಳಿಕ ಉಭಯ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಕಮಿನ್ಸ್‌ ಆಡಲಿದ್ದಾರೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಇನ್ನು ಗಾಯಗೊಂಡು ತವರಿಗೆ ತೆರಳಿರುವ ಮತ್ತೊಬ್ಬ ಆಟಗಾರ ಜೆ.ರಿಚರ್ಡ್‌ಸನ್‌ ಬದಲು ನಥಾನ್‌ ಎಲ್ಲಿಸ್‌ ಅವರು ಮಾರ್ಚ್‌ 17ರಿಂದ ಆರಂಭವಾಗುವ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳಲಿದ್ದಾರೆ ಎಂದೂ ವೆಬ್‌ಸೈಟ್‌ ತಿಳಿಸಿದೆ.

SCROLL FOR NEXT