ಕ್ರಿಕೆಟ್

ICC Cricket World Cup 2023: ಆಸ್ಟ್ರೇಲಿಯಾಗೆ ಭಾರಿ ಆಘಾತ, ಪ್ರಮುಖ ಆಲ್ರೌಂಡರ್ ತವರಿಗೆ ವಾಪಸ್

Srinivasamurthy VN

ಹೈದರಾಬಾದ್: ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಿರ್ಣಾಯಕ ಘಟ್ಟದತ್ತ ಸಾಗುತ್ತಿರುವಂತೆಯೇ ಇತ್ತ ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಲ್ರೌಂಡರ್ ಇದೀಗ ತವರಿಗೆ ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ.

ಹೌದು.. ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಸೆಮೀಸ್ ನತ್ತ ದಾಪುಗಾಲಿರಿಸಿರುವಂತೆಯೇ ಇತ್ತ ತಂಡದ ಸ್ಟಾರ್​ ಆಲ್‌ರೌಂಡರ್​ ಮಿಚೆಲ್​ ಮಾರ್ಷ್​ ವೈಯಕ್ತಿಕ ಕಾರಣಗಳಿಗಾಗಿ ತವರಿಗೆ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ. ಪರ್ತ್‌ನಲ್ಲಿರುವ ತಮ್ಮ ಮನೆಗೆ ಮಿಚೆಲ್ ಮಾರ್ಷ್ ತೆರಳಿದ್ದು, ವಿಶ್ವಕಪ್ ಟೂರ್ನಿಯಿಂದ​ ಸ್ವಲ್ಪ ಸಮಯದವರೆಗೆ ಅವರು ಹೊರಗುಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಮಾಹಿತಿ ನೀಡಿದೆ. 

ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡಿರುವ ಆಸ್ಟ್ರೇಲಿಯಾ ಕ್ರಿಕೆಟ್, ಮಿಚೆಲ್​ ಮಾರ್ಷ್ ವೈಯಕ್ತಿಕ ಕಾರಣಗಳಿಂದ ಬುಧವಾರ ಮನೆಗೆ ಮರಳಿದ್ದಾರೆ. ಅನಿರ್ದಿಷ್ಟಾವಧಿವರೆಗೆ ಅವರು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಘೋಷಿಸಿದೆ. ಆದರೆ, ಯಾವ ಕಾರಣಕ್ಕಾಗಿ ಅವರು ತೆರಳಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಎಷ್ಟು ಸಮಯದವರೆಗೆ ತಂಡದಿಂದ ಹೊರಗುಳಿಯಲಿದ್ದಾರೆ, ಮಿಚೆಲ್ ಮಾರ್ಷ್ ಅವರ ಬದಲಿ ಆಟಗಾರ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈಗಾಗಲೇ ಆಸ್ಟ್ರೇಲಿಯಾ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದು, ಕಳೆದ ಸೋಮವಾರ ಗ್ಲೆನ್ ಮ್ಯಾಕ್ಸ್‌ವೆಲ್ ಗಾಲ್ಫ್ ಕಾರ್ಟ್‌ನಲ್ಲಿ ಹೋಗುತ್ತಿದ್ದಾಗ, ಹಿಂಭಾಗದಿಂದ ಬಿದ್ದು ತಲೆ ಮತ್ತು ಮೂಗಿಗೆ ಗಾಯಗಳಾಗಿವೆ. ಹೀಗಾಗಿ ಶನಿವಾರದ ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ.

ಈ ನಡುವೆ ಉತ್ತಮ ಫಾರ್ಮ್‌ನಲ್ಲಿದ್ದ ಮಾರ್ಷ್ ಕೂಡ ಮನೆಗೆ ಹಿಂತಿರುಗಿದ್ದು​ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ. ವಿಶ್ವಕಪ್​ನಲ್ಲಿ ಇಲ್ಲಿಯವರೆಗೆ ಮಾರ್ಷ್ ಒಟ್ಟು 225 ರನ್ ಗಳಿಸಿದ್ದು, ಎರಡು ವಿಕೆಟ್‌ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಆಕರ್ಷಕ ಶತಕ (121) ಸಿಡಿಸಿದ್ದರು.

SCROLL FOR NEXT