ಕ್ರಿಕೆಟ್

ಭಾರತದ ವಿರುದ್ಧ ಹೀನಾಯ ಸೋಲು; ವಜಾಗೊಂಡಿದ್ದ ಕ್ರಿಕೆಟ್ ಮಂಡಳಿಯನ್ನು ಮರುಸ್ಥಾಪಿಸಿದ ಶ್ರೀಲಂಕಾ ಕೋರ್ಟ್

Ramyashree GN

ಕೊಲಂಬೊ: ಐಸಿಸಿ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಡವು ಹೀನಾಯ ಸೋಲನುಭವಿಸಿದ ಬಳಿಕ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ ಶ್ರೀಲಂಕಾದ ಕ್ರೀಡಾ ಸಚಿವ ರೋಷನ್ ರಣಸಿಂಘೆ ಹೊರಡಿಸಿದ್ದ ಆದೇಶವನ್ನು ಮಂಗಳವಾರ ನ್ಯಾಯಾಲಯ ರದ್ದುಗೊಳಿಸಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಕ್ರಿಕೆಟ್ ಮಂಡಳಿಯನ್ನು ತಾತ್ಕಾಲಿಕವಾಗಿ ಮರುಸ್ಥಾಪಿಸಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ ಮಧ್ಯಂತರ ಸಮಿತಿಯನ್ನು ನೇಮಿಸಿರುವ ಸಚಿವ ರೋಷನ್ ರಣಸಿಂಘೆ ಅವರ ಕ್ರಮವನ್ನು ಪ್ರಶ್ನಿಸಿ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸೋಮವಾರ ಅಂಗೀಕರಿಸಿತು.
'ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮರುಸ್ಥಾಪನೆಯು ಮುಂದಿನ ಎರಡು ವಾರಗಳವರೆಗೆ ಇರುತ್ತದೆ. ನ್ಯಾಯಾಲಯವು ಈ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುತ್ತದೆ' ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ್ದ ರಣಸಿಂಘೆ ಅವರು, 1996ರ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಅವರನ್ನು ಮಂಡಳಿಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದೀಗ ಈ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದ್ದು, ಶಮ್ಮಿ ಸಿಲ್ವಾ ಅವರೇ ಕೆಲಸಕ್ಕೆ ಮರಳಲಿದ್ದಾರೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಳಿಯ 'ಬಾಕಿ ಉಳಿದಿರುವ ಸಮಸ್ಯೆಗಳನ್ನು' ಪರಿಹರಿಸಲು ಸರ್ಕಾರವು ಕ್ಯಾಬಿನೆಟ್ ಸಮಿತಿಯನ್ನು ಸಹ ನೇಮಿಸಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ದ್ವೀಪ ರಾಷ್ಟ್ರದ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಳಗೆ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದು, ಮೇ ತಿಂಗಳಿನಿಂದಲೂ ರಣಸಿಂಘೆ ಅವರು ಮಂಡಳಿಯೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. 

1996ರ ವಿಶ್ವಕಪ್ ವಿಜೇತ ತಂಡದ ನಾಯಕ ರಣತುಂಗ ಅವರು ಸೋಮವಾರ ಅಧಿಕಾರ ವಹಿಸಿಕೊಂಡ ನಂತರ ಮಂಡಳಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಮತ್ತು ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದ್ದರು.

'ಶ್ರೀಲಂಕಾ ಕ್ರಿಕೆಟ್ ಮಂಡಳಿಯು ದೇಶದ ಅತ್ಯಂತ ಭ್ರಷ್ಟ ಸಂಸ್ಥೆ ಎಂದು ಹೆಸರಾಗಿದೆ. ನಾನು ಆ ಇಮೇಜ್ ಅನ್ನು ಬದಲಾಯಿಸಲು ಬಯಸುತ್ತೇನೆ' ಎಂದು ರಣತುಂಗ ಸೋಮವಾರ ಹೇಳಿದ್ದಾರೆ.

SCROLL FOR NEXT