ಕ್ರಿಕೆಟ್

ಏಂಜೆಲೊ ಮ್ಯಾಥ್ಯೂಸ್ 'ಟೈಮ್ ಔಟ್' ವಿವಾದ: 2023ರ ವಿಶ್ವಕಪ್‌ ಟೂರ್ನಿಯಿಂದಲೇ ಶಕೀಬ್ ಅಲ್ ಹಸನ್ ಔಟ್!

Vishwanath S

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ನಾಕೌಟ್ ಹಂತಕ್ಕೂ ಮುನ್ನ ಬಾಂಗ್ಲಾದೇಶ ದೊಡ್ಡ ಹಿನ್ನಡೆ ಅನುಭವಿಸಿದ್ದು ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟೂರ್ನಿಯಿಂದಲೇ ಹೊರಹೋಗಿದ್ದಾರೆ. 

ನವೆಂಬರ್ 6ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಮಾಡುವಾಗ ಶಕೀಬ್ ಅಲ್ ಹಸನ್ ಗಾಯಗೊಂಡಿದ್ದರು. ಅವರ ಕೈ ಬೆರಳಿಗೆ ಗಾಯವಾಗಿದ್ದು ಇದರಿಂದ ಟೂರ್ನಿಯಿಂದ ಹೊರಹೋಗಿದ್ದಾರೆ. 

ಶ್ರೀಲಂಕಾ vs ಬಾಂಗ್ಲಾದೇಶ ಪಂದ್ಯದ ನಂತರ ಶಕೀಬ್ ಅಲ್ ಹಸನ್ ಅವರ ಬೆರಳಿನ ಮೂಳೆ ಮುರಿತ ಎಕ್ಸ್-ರೇನಲ್ಲಿ ದೃಢಪಟ್ಟಿದೆ. ಈ ಕಾರಣದಿಂದಾಗಿ, ಅವರು ಈಗ ನವೆಂಬರ್ 11ರಂದು ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮತ್ತು ಉಳಿದ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.

ಶಕೀಬ್ ಅಲ್ ಹಸನ್ ಶ್ರೀಲಂಕಾ ವಿರುದ್ಧ 65 ಎಸೆತಗಳಲ್ಲಿ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಶಕೀಬ್ ಅಲ್ ಹಸನ್ 12 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಶಕೀಬ್ ಅಲ್ ಹಸನ್ ಅವರ 82 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಬಾಂಗ್ಲಾದೇಶವು ಕಠಿಣ ಪಂದ್ಯದಲ್ಲಿ ಶ್ರೀಲಂಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ನಾವು ವಿಶ್ವಕಪ್ 2023 ರ ಪಾಯಿಂಟ್ಸ್ ಟೇಬಲ್ ಬಗ್ಗೆ ಮಾತನಾಡುವುದಾದರೆ, ಬಾಂಗ್ಲಾದೇಶವು 7 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ 8 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶಕ್ಕೆ ಸೆಮಿಫೈನಲ್‌ನ ಬಾಗಿಲು ಇನ್ನೂ ತೆರೆದಿದೆ. ಇಂತಹ ಪರಿಸ್ಥಿತಿಯಲ್ಲಿ ಶಕೀಬ್ ವಿಶ್ವಕಪ್ ಆಡದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ಮ್ಯಾಥ್ಯೂಸ್ ಜತೆ ವಾಗ್ವಾದ
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ಜೊತೆಗಿನ ವಾಗ್ವಾದದ ನಂತರ ಶಕೀಬ್ ಅಲ್ ಹಸನ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಮ್ಯಾಥ್ಯೂಸ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು ಆದರೆ ಅವರ ಹೆಲ್ಮೆಟ್ ಮುರಿದಿತ್ತು. ಹೀಗಾಗಿ ಮ್ಯಾಥ್ಯೂಸ್ ಹೆಲ್ಮೆಟ್ ಬದಲಾಯಿಸಲು 2 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಈ ನಡುವೆ ಶಕೀಬ್ ಮ್ಯಾಥ್ಯೂಸ್ ಅವರನ್ನು ಔಟ್ ಎಂದು ಘೋಷಿಸುವಂತೆ ಅಂಪೈರ್‌ಗೆ ಮನವಿ ಮಾಡಿದರು. ಅಂತಿಮವಾಗಿ ಅಂಪೈರ್ ಮ್ಯಾಥ್ಯೂಸ್ ಅವರನ್ನು ಔಟ್ ಘೋಷಿಸಿದರು. ಇದಾದ ನಂತರ, ಶಕೀಬ್ ಅಲ್ ಹಸನ್ ಆಟದ ಸ್ಪೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ ವಿಶ್ವದ ಅನೇಕ ಶ್ರೇಷ್ಠ ಕ್ರಿಕೆಟಿಗರಿಂದ ಟೀಕಿಗೆ ಗುರಿಯಾಗಿದ್ದಾರೆ.

SCROLL FOR NEXT