ಕ್ರಿಕೆಟ್

'ನಾನು ಐಶ್ವರ್ಯಾ ರೈ ಮದುವೆಯಾಗಿದಿದ್ದರೆ'; ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಕೀಳು ಅಭಿರುಚಿ ಹೇಳಿಕೆ

Srinivasamurthy VN

ಲಾಹೋರ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ನಾಲಗೆ ಹರಿಬಿಟ್ಟಿದ್ದಾರೆ.

ಹೌದು.. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಹೆಸರನ್ನು ಅನಗತ್ಯವಾಗಿ ತಮ್ಮ ಮಾತಿನ ಮಧ್ಯೆ ಎಳೆದು ತರುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. 

ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರಿಂದ ತಂಡವು ಬೇಗನೆ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಳಗಿನ ಪ್ರಕ್ಷುಬ್ಧತೆಯ ಕುರಿತು ರಜಾಕ್​ ಮಾತನಾಡುತ್ತಿದ್ದರು. ಈ ವೇಳೆ ಅವರು ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನು ಮದುವೆಯಾಗಿರುತ್ತಿದ್ದರೆ ಉತ್ತಮ ಮಕ್ಕಳು ಹುಟ್ಟುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಹೇಳಿಕೆ ಕೊಟ್ಟಿದ್ದಾರೆ. ಅಬ್ದುಲ್ ರಜಾಕ್ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಪಾಕ್​​ ಕ್ರಿಕೆಟ್​ ಆಡಳಿತಕ್ಕೂ ಐಶ್ವರ್ಯ ರೈಗೂ ಯಾವುದೇ ಸಂಬಂಧ ಇಲ್ಲ. ಅಂಥದ್ದರಲ್ಲಿ ಬೇರೆ ದೇಶದ, ಬೇರೆ ಧರ್ಮದ ನಟಿಯೊಬ್ಬಳನ್ನು ಮದುವೆಯಾಗಿ ಅವರಿಗೆ ಒಳ್ಳೆಯ ಮಕ್ಕಳು ಹುಟ್ಟುವುದಿಲ್ಲ ಎಂಬ ಬೇಡ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂಬುದಾಗಿ ಐಶ್ವರ್ಯಾ ಅಭಿಮಾನಿಗಳು ಟೀಕಿಸಿದ್ದಾರೆ.

ನೆಟ್ಟಗೆ ಆಡಲು ಬಾರದ ಪಾಕ್​ ತಂಡದ ಬಗ್ಗೆ ಉದಾಹರಣೆ ನೀಡಲು ನಮ್ಮ ನಟಿಯೇ ಬೇಕಾಗಿತ್ತಾ. ನಿಮ್ಮಲ್ಲಿರುವ ಯಾರಾದರೂ ಕಳಪೆ ನಟಿಯನ್ನು ಉದಾಹರಣೆ ನೀಡಿ ಎಂದು ಕ್ರೋಧ ವ್ಯಕ್ತಪಡಿಸಿದ್ದಾರೆ. ಅಂತೆಯೇ ವಿಶ್ವಕಪ್​ನಲ್ಲಿ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಇರುವ ಇದೇ ಹೊತ್ತಿನಲ್ಲಿ ಮಾಜಿ ಕ್ರಿಕೆಟಿಗನ ಬೇಜವಾಬ್ದಾರಿ ಹೇಳಿಕೆ ಉರಿಯುವ ಬೆಂಕಿ ತುಪ್ಪ ಸುರಿದಂತಾಗಿದೆ. 
 

SCROLL FOR NEXT