ಕ್ರಿಕೆಟ್

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಕೋಚ್!

Nagaraja AB

ನವದೆಹಲಿ: ಭಾರತದ ಮಾಜಿ ಎಡಗೈ ಸ್ಪಿನ್ನರ್ ಶ್ರೀಧರನ್ ಶ್ರೀರಾಮ್ ಅವರು ಮುಂಬರುವ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆಸಹಾಯಕ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ತಿಳಿಸಿದೆ. ಎಲ್ ಎಸ್ ಜಿ ಈ ಹಿಂದೆ ಆಂಡಿ ಫ್ಲವರ್ ಬದಲಿಗೆ ಜಸ್ಟಿನ್ ಲ್ಯಾಂಗರ್ ಅವರನ್ನು ನೂತನ ಮುಖ್ಯ ತರಬೇತುದಾರರನ್ನಾಗಿ ನೇಮಿಸಿತ್ತು. ಲ್ಯಾಂಗರ್ ಹಾಗೂ ಮಾರ್ಗದರ್ಶಕ ಗೌತಮ್ ಗಂಭೀರ್ ನೇತೃತ್ವದಲ್ಲಿ ಶ್ರೀರಾಮ್ ಅವರ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ. 

ವಿಜಯ್ ದಹಿಯಾ ಮತ್ತು ಪ್ರವೀಣ್ ತಾಂಬೆ ಕ್ರಮವಾಗಿ ಸಹಾಯಕ ಕೋಚ್ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿ ಮುಂದುವರಿದರೆ, ದಕ್ಷಿಣ ಆಫ್ರಿಕಾದ ಮೊರ್ನೆ ಮೊರ್ಕೆಲ್ ಮತ್ತು ಜಾಂಟಿ ರೋಡ್ಸ್ ತಂಡದ ಬೌಲಿಂಗ್ ಕೋಚ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫ್ರಾಂಚೈಸ್ ಹೇಳಿಕೆಯಲ್ಲಿ ತಿಳಿಸಿದೆ.

2000-04ರಲ್ಲಿ ಭಾರತ ಪರ ಎಂಟು ಏಕದಿನ ಪಂದ್ಯಗಳನ್ನು ಆಡಿರುವ ಶ್ರೀರಾಮ್, ಆರು ವರ್ಷಗಳ ಕಾಲ ಆಸ್ಟ್ರೇಲಿಯಾದ ಸಹಾಯಕ ಕೋಚ್ ಆಗಿದ್ದರು. 2016ರಲ್ಲಿ ಅವರು ಮೊದಲ ಬಾರಿಗೆ ಆಗಿನ ಮುಖ್ಯ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಅಡಿಯಲ್ಲಿ ಸ್ಪಿನ್ ತರಬೇತುದಾರರಾಗಿ ನೇಮಕವಾಗಿದ್ದರು. 

ತಮಿಳುನಾಡು, ಮಹಾರಾಷ್ಟ್ರ, ಗೋವಾ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್‌ನಲ್ಲಿ ಆಡಿರುವ ಶ್ರೀರಾಮ್, ಲೆಗ್ ಸ್ಪಿನ್ನರ್ ಆಡಮ್ ಝಂಪಾ, ಎಡಗೈ ಸ್ಪಿನ್ನರ್ ಆಶ್ಟನ್ ಅಗರ್ ಮತ್ತಿತರ ಅನುಭವಿ ಆಟಗಾರರ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ ಎಂದು ತಿಳಿದುಬಂದಿದೆ. 

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಏಷ್ಯಾ ಕಪ್‌ನಿಂದ ಟಿ20 ವಿಶ್ವಕಪ್‌ವರೆಗೆ ಬಾಂಗ್ಲಾದೇಶ ಟಿ20 ತಂಡಕ್ಕೆ ತಾಂತ್ರಿಕ ಸಲಹೆಗಾರರಾಗಿ ಶ್ರೀರಾಮ್ ನೇಮಕಗೊಂಡಿದ್ದರು. 2008 ರಲ್ಲಿ ಇಸಿಬಿ ಲೆವೆಲ್-3 "ಹೆಡ್ ಕೋಚ್" ಎಂಬ ಪ್ರತಿಷ್ಠಿತ ಗೌರವ ಗಳಿಸಿದ ಶ್ರೀರಾಮ್, ಈ ಹಿಂದಿನಿಂದಲೂ ಐಪಿಎಲ್ ನಲ್ಲಿ ತೊಡಗಿಸಿಕೊಂಡಿದ್ದರು. ಈ ವರ್ಷದ ಐಪಿಎಲ್ ವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್‌ನಲ್ಲಿ ಪರಿಣತಿ ಪಡೆದ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ. 

SCROLL FOR NEXT