ಕ್ರಿಕೆಟ್

ಏಷ್ಯಾ ಕಪ್: ಕೊಹ್ಲಿ, ರಾಹುಲ್ ಭರ್ಜರಿ ಶತಕ; ಪಾಕ್ ಗೆ 357 ರನ್ ಟಾರ್ಗೆಟ್ ನೀಡಿದ ಭಾರತ

Lingaraj Badiger

ಕೊಲಂಬೊ: ಕೊಲಂಬೋದ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ-ಪಾಕ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರ ಭರ್ಜರಿ ಶತಕಗಳ ನೆರವಿನಿಂದ ಟೀಂ ಇಂಡಿಯಾ, ಪಾಕ್ ಗೆಲುವಿಗೆ 357 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಅವರು ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ಶತಕಗಳ ನೆರವಿನಿಂದ 2 ವಿಕೆಟ್ ನಷ್ಟಕ್ಕೆ ನಿಗದಿತ 50 ಓವರ್ ಗಳಲ್ಲಿ 356 ರನ್ ಗಳಿಸಿದೆ. 

ಸ್ಫೋಟಕ ಬ್ಯಾಟಿಂಗ್ ನಿಂದ ಮಿಂಚಿದ ಕೆಎಲ್ ರಾಹುಲ್ ತಮ್ಮ ಕಮ್‌ಬ್ಯಾಕ್ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ. ಕೆಎಲ್ ರಾಹುಲ್ 106  ಎಸೆತದಲ್ಲಿ ಅಜೇಯ  111 ರನ್ ಸಿಡಿಸಿ ಸಂಭ್ರಮಿಸಿದರು. ಇದರೊಂದಿಗೆ ಕೆಎಲ್ ರಾಹುಲ್ 6ನೇ ಶತಕ ದಾಖಲಿಸಿದರು. 

ಇತ್ತ ರಾಹುಲ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಹ ತಮ್ಮ 47ನೇ ಏಕದಿನ ಸೆಂಚುರಿ ಸಿಡಿಸಿದರು. ವಿರಾಟ್ ಕೊಹ್ಲಿ 94 ಎಸೆತದಲ್ಲಿ ಅಜೇಯ 124 ರನ್ ಗಳಿಸಿದ್ದಾರೆ.

ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯ ಮಳೆಯಿಂದಾಗಿ ನಿನ್ನೆ ಸ್ಥಗಿತಗೊಂಡಿತ್ತು. ಈ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಮೀಸಲು ದಿನವಾದ ಇಂದು ಪಂದ್ಯ ಆರಂಭಕ್ಕೆ ಮತ್ತೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ವಿಳಂಬವಾಗಿ ಪಂದ್ಯ ಆರಂಭಗೊಂಡರೂ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕಿಸ್ತಾನಕ್ಕೆ ಬಿಗ್ ಟಾರ್ಗೆಟ್ ನೀಡಲಾಗಿದೆ.

SCROLL FOR NEXT