ಕ್ರಿಕೆಟ್

ಏಷ್ಯಾಕಪ್ 2023 ಫೈನಲ್: ಭಾರತ ಮಾರಕ ಬೌಲಿಂಗ್ ದಾಳಿಗೆ ಲಂಕಾ ಸರ್ವ ಪತನ: 50 ರನ್ ಕಳಪೆ ಮೊತ್ತ ದಾಖಲು!

Vishwanath S

ಕೊಲಂಬೊ: ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 50 ರನ್ ಗಳಿಗೆ ಆಲೌಟ್ ಆಗಿದೆ. ಇದು ಏಷ್ಯಾಕಪ್ ನಲ್ಲಿ ಅತ್ಯಂತ ಕಳಪೆ ಮೊತ್ತವಾಗಿದೆ.

ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಮಾರಕವಾಗಿ ಕಾಡಿದರು. ಹೀಗಾಗಿ ಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ 51 ರನ್ ಗಳ ಗುರಿ ನೀಡಿದೆ.

ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕುಸಲ್ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಶ್ರೀಲಂಕಾಕ್ಕೆ ದೊಡ್ಡ ಹೊಡೆತ ನೀಡಿದರು. ಇದರ ನಂತರ, ಸಿರಾಜ್ ಅವರು ತಮ್ಮ ಮೊದಲ ಓವರ್‌ನಲ್ಲಿ ಮೇಡನ್ ಪಡೆದರು. ನಂತರದ ಓವರ್‌ನಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರು ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜಾಗೆ ಪಾಥುಮ್ ನಿಸ್ಸಾಂಕ ಕ್ಯಾಚ್ ನೀಡಿದರು. ಇದಾದ ಬಳಿಕ ಮೂರನೇ ಎಸೆತದಲ್ಲಿ ಸದಿರಾ ಔಟಾದರು. ಅಸಲಂಕಾ ನಾಲ್ಕನೇ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು. ಸಿರಾಜ್ ಹ್ಯಾಟ್ರಿಕ್ ಮಿಸ್ ಆದರೆ ಕೊನೆಯ ಎಸೆತದಲ್ಲಿ ಧನಂಜಯ್ ಗೆ ಪೆವಿಲಿಯನ್ ಹಾದಿ ತೋರಿಸಿ ನಾಲ್ಕನೇ ವಿಕೆಟ್ ಪಡೆದರು.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಇತಿಹಾಸ ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 4 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯಾಕಪ್ 2023 ರ ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ, ಮೊಹಮ್ಮದ್ ಸಿರಾಜ್ ಕೇವಲ 15 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದು ಇದು ದಾಖಲೆಯಾಗಿದೆ.

ಲಂಕಾ ಪರ ಬ್ಯಾಟಿಂಗ್ ನಲ್ಲಿ ಕುಶಾಲ್ ಮೆಂಡಿಸ್ 17 ಮತ್ತು ದುಶನ್ ಹೇಮಂತ್ 13 ರನ್ ಸಿಡಿಸಿದ್ದು ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ. ಭಾರತ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 6, ಹಾರ್ದಿಕ್ ಪಾಂಡ್ಯ 3 ಮತ್ತು ಜಸ್ ಪ್ರೀತ್ ಬುಮ್ರಾ 1 ವಿಕೆಟ್ ಪಡೆದಿದ್ದಾರೆ. 

SCROLL FOR NEXT