ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

IPL 2024: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ

Ramyashree GN

ಮುಲ್ಲನ್‌ಪುರ: ಇಂಡಿಯನ್ ಪ್ರೀಮಿಯರ್ ಲೀಗ್‌ (2024) ನೇ ಆವೃತ್ತಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 9 ರನ್‌ಗಳ ರೋಚಕ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮುಲ್ಲನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.

193 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ಸ್ಯಾಮ್ ಕರನ್ 6 ರನ್ ಗಳಿಸಿ ಔಟಾದರೆ, ಪ್ರಭ್‌ಸಿಮ್ರನ್ ಸಿಂಗ್ ಮೊದಲ ಎಸೆತದಲ್ಲೇ ಔಟಾದರು. 14 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಗೆ ಸಿಲುಕಿತ್ತು.

ಕೊನೆಗೆ 19.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಪಂಜಾಬ್, 183 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡಿತು.

ಮುಂಬೈ ಇಂಡಿಯನ್ಸ್ ತಂಡವು ಈವರೆಗೆ ಏಳು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಿಂದ ಏಳನೇ ಸ್ಥಾನಕ್ಕೇರಿದೆ. ಪಂಜಾಬ್ ತಂಡವು ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋಲು ಕಾಣುವ ಮೂಲಕ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

'ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 18ರಂದು ಮುಲ್ಲನ್‌ಪುರದ ಪಿಸಿಎ ನ್ಯೂ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ಅವರಿಗೆ ದಂಡ ವಿಧಿಸಲಾಗಿದೆ' ಎಂದು ಶುಕ್ರವಾರ ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಲೋ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 22 ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.

SCROLL FOR NEXT