ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ TNIE
ಕ್ರಿಕೆಟ್

IPL 2024: ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್

Vishwanath S

ನವದೆಹಲಿ: ಐಪಿಎಲ್ 2024ರ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ರನ್ ಗಳಿಂದ ಸೋಲಿಸಿ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ನಾಲ್ಕನೇ ಗೆಲುವಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 224 ರನ್ ಪೇರಿಸಿತ್ತು. ಈ ಪಂದ್ಯದಲ್ಲಿ ರಿಷಭ್ ಪಂತ್ ಅತಿ ಹೆಚ್ಚು ರನ್ ಗಳಿಸಿದ್ದರು. ಪಂತ್ 43 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಈ ವೇಳೆ ಅವರು 5 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ ಅಕ್ಷರ್ ಪಟೇಲ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 43 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರು. ಈ ಇಬ್ಬರು ಆಟಗಾರರು ಜೊತೆಯಾಗಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು. ಅದೇ ಸಮಯದಲ್ಲಿ, ಟ್ರಿಸ್ಟಾನ್ ಸ್ಟಬ್ಸ್ 7 ಎಸೆತಗಳಲ್ಲಿ ಅಜೇಯ 26 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.

225 ರನ್‌ಗಳ ಗುರಿಗೆ ಉತ್ತರವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 220 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ 65 ರನ್ ಗಳಿಸಿದರು. ಅದೇ ಸಮಯದಲ್ಲಿ, ಡೇವಿಡ್ ಮಿಲ್ಲರ್ 23 ಎಸೆತಗಳಲ್ಲಿ 55 ರನ್ ಗಳಿಸಿದರು. ವೃದ್ಧಿಮಾನ್ ಸಹಾ ಸಹ 39 ರನ್ ಬಾರಿಸಿದರು. ಮತ್ತೊಂದೆಡೆ, ರಶೀದ್ ಖಾನ್ 11 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರು. ಆದರೆ ಈ ಇನ್ನಿಂಗ್ಸ್ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು, ಆದರೆ ಕೇವಲ 14 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಡೆಲ್ಲಿ ಪರ ರಾಸಿಖ್ ದಾರ್ ಗರಿಷ್ಠ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ. ಇದಕ್ಕೂ ಮೊದಲು 8ನೇ ಸ್ಥಾನ ಪಡೆದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಸಕ್ತ ಋತುವಿನಲ್ಲಿ ಇದುವರೆಗೆ 9 ಪಂದ್ಯಗಳನ್ನು ಆಡಿದ್ದು, 4 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡ ಈ ಸೋಲಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಬಂದಿದೆ.

SCROLL FOR NEXT