ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಬಾರದ ಭಾರತಕ್ಕೂ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಳುಹಿಸಬಾರದು ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಕರಾಚಿ ಕಲಾ ಪರಿಷತ್ತಿನಲ್ಲಿ ಉರ್ದು ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಶಾಹಿದ್ ಅಫ್ರಿದಿ, 'ಭಾರತ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಒಪ್ಪದ ಹೊರತು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಬಾರದು. ಐಸಿಸಿ ಪಂದ್ಯಾವಳಿಗಳು ಸೇರಿದಂತೆ ಭಾರತದಲ್ಲಿ ನಡೆಯುವ ಎಲ್ಲಾ ಪಂದ್ಯಗಳನ್ನು ನಾವು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ಅಂತೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಾರತದೊಂದಿಗಿನ ಕ್ರಿಕೆಟ್ ಬಾಂಧವ್ಯದ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ವಿಶೇಷವಾಗಿ ಚಾಂಪಿಯನ್ಸ್ ಟ್ರೋಫಿಯಂತಹ ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಬಗ್ಗೆ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನ ಸ್ವಾವಲಂಬಿಯಾಗಬೇಕು. ಯಾವುದೇ ಕ್ರಿಕೆಟ್ ಪಂದ್ಯಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸುವುದನ್ನು ತಡೆಯಬೇಕು ಎಂದು ಶಾಹಿದ್ ಅಫ್ರಿದಿ ಪಿಸಿಬಿಗೆ ಒತ್ತಾಯಿಸಿದ್ದಾರೆ.
ಶಾಹೀನ್ ಅಫ್ರಿದಿ ನಾಯಕನಾಗುವುದು ಬೇಡ ಎಂದಿದ್ದೆ
ಇನ್ನು ಪಾಕಿಸ್ತಾನದ ಕಳಪೆ ಪ್ರದರ್ಶನದ ಕುರಿತು ಮಾತನಾಡಿದ ಶಾಹೀದ್ ಅಫ್ರಿದಿ, 'ಶಾಹೀನ್ ಅಫ್ರಿದಿಯನ್ನು ಪಾಕಿಸ್ತಾನದ ಟಿ20 ನಾಯಕನನ್ನಾಗಿ ಮಾಡಿದಾಗ ನಾನು ಅದನ್ನು ವಿರೋಧಿಸಿದ್ದೆ. ಮಹಮ್ಮದ್ ರಿಜ್ವಾನ್ ಅವರನ್ನು ಅತ್ಯುತ್ತಮ ಆಯ್ಕೆಯಾಗಿ ಮಂಡಳಿಯು ನಾಯಕನನ್ನಾಗಿ ಮಾಡಬೇಕೆಂದು ನಾನು ಹೇಳಿದೆ.
ಆದರೆ ಒಮ್ಮೆ ಅವರು ಶಾಹೀನ್ ಅವರನ್ನು ನಾಯಕನನ್ನಾಗಿ ಮಾಡಿದ ನಂತರ ಪಿಸಿಬಿ ಅವರನ್ನು ಕೇವಲ ಒಂದು ಸರಣಿಯ ನಂತರ ನಾಯಕನ ಸ್ಥಾನದಿಂದ ತೆಗೆದುಹಾಕುವುದೂ ಸಹ ತಪ್ಪಾಗಿದೆ. ಇದು ಅವನ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದರು.