ಬ್ರಿಸ್ಬೇನ್: ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಭರ್ಜರಿ ಪ್ರದರ್ಶನದ ಹೊರತಾಗಿಯೂ ಭಾರತದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಅಪರೂಪದ ದಾಖಲೆ ಮಾಡಿದ್ದು, ಭಾರತದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದಾರೆ.
ಗಾಬಾ ಮೈದಾನದಲ್ಲಿ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಒಂದೆಡೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಶತಕ ಸಿಡಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೆ, ಮತ್ತೊಂದೆಡೆ ಭಾರತದ ಪರ ವೇಗಿ ಜಸ್ ಪ್ರೀತ್ ಬುಮ್ರಾ ಕೂಡ ಆಸಿಸ್ ಬ್ಯಾಟರ್ ಗಳನ್ನು ಕಾಡಿದರು. ಆಸ್ಟ್ರೇಲಿಯಾ ಬ್ಯಾಟರ್ಗಳ ಅಬ್ಬರದ ನಡುವೆ ಕರಾರುವಾಕ್ ದಾಳಿ ನಡೆಸಿದ ಬುಮ್ರಾ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ದ್ವಿತೀಯ ದಿನದಾಟದ ಆರಂಭದಲ್ಲೇ ಉಸ್ಮಾನ್ ಖ್ವಾಜಾ (21) ವಿಕೆಟ್ ಕಬಳಿಸಿ ಶುಭಾರಂಭ ಮಾಡಿದ ಬುಮ್ರಾ, ಆ ಬಳಿಕ ನಾಥನ್ ಮೆಕ್ಸ್ವೀನಿ (9), ಸ್ವೀವ್ ಸ್ಮಿತ್ (101) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಬಂದ ಮಿಚೆಲ್ ಮಾರ್ಷ್ 5 ಮತ್ತು ಅವರ ಬೆನ್ನಲ್ಲೇ ಟ್ರಾವಿಸ್ ಹೆಡ್ (152) ರನ್ನು ಕೂಡ ಬುಮ್ರಾ ಔಟ್ ಮಾಡಿದರು. ಆ ಮೂಲಕ ಬುಮ್ರಾ ಮತ್ತೆ ತಮ್ಮ ಖಾತೆಗೆ 5 ವಿಕೆಟ್ ಗಳ ಗೊಂಚಲು ಸೇರಿಸಿಕೊಂಡರು.
ಕಪಿಲ್ ದೇವ್ ದಾಖಲೆ ಪತನ
ಈ 5 ವಿಕೆಟ್ಗಳೊಂದಿಗೆ ವಿದೇಶಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತದ ವೇಗಿ ಎಂಬ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೆಸರಿನಲ್ಲಿತ್ತು. ಕಪಿಲ್ ದೇವ್ ವಿದೇಶಿ ಟೆಸ್ಟ್ನಲ್ಲಿ 10 ಬಾರಿ 5 ವಿಕೆಟ್ಗಳ ಗುಚ್ಛ ಪಡೆದಿದ್ದಾರೆ. ಇದೀಗ ವಿದೇಶಿ ಪಿಚ್ನಲ್ಲಿ 11ನೇ ಬಾರಿ 5 ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಲೈಟ್ ಗ್ರೂಪ್ ಸೇರ್ಪಡೆ
ಹಾಗೆಯೇ SENA (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆ ಕೂಡ ಬುಮ್ರಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕೂಡ ಕಪಿಲ್ ದೇವ್ (7 ಬಾರಿ) ಹೆಸರಿನಲ್ಲಿತ್ತು. ಇದೀಗ 8ನೇ ಬಾರಿ 5 ವಿಕೆಟ್ ಕಬಳಿಸಿ SENA ದೇಶದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಈ ಮಿಂಚಿನ ದಾಳಿಯ ಹೊರತಾಗಿಯೂ ಆಸ್ಟ್ರೇಲಿಯಾ ತಂಡವು ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ (151) ಹಾಗೂ ಸ್ಟೀವ್ ಸ್ಮಿತ್ (101) ಬಾರಿಸಿದ ಸೆಂಚುರಿಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು 2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ.