ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶತಕದಂಚಿನಲ್ಲಿದ್ದ ಯಶಸ್ವಿ ಜೈಸ್ವಾಲ್ ಅನಗತ್ಯ ರನೌಟ್ ಗೆ ಬಲಿಯಾಗಿದ್ದು, ಇದೇ ವಿಚಾರವಾಗಿ ಮಾಜಿ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್ ಮತ್ತು ಇರ್ಫಾನ್ ಪಠಾಣ್ ಲೈವ್ ಡಿಬೇಟ್ ನಲ್ಲೇ ಜಟಾಪಟಿ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮುಕ್ತಾಯದ ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ಆರಂಭಿಕ ಆಘಾತದ ಹೊರತಾಗಿಯೂ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಉತ್ತಮ ಜೊತೆಯಾಟ ನೀಡಿತ್ತು. ಈ ಜೋಡಿ 3ನೇ ವಿಕೆಟ್ ಗೆ 102 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ ತಲೆನೋವಾಗಿ ಪರಿಣಮಿಸಿತ್ತು.
ಆದರೆ ಈ ಹಂತದಲ್ಲಿ ಇನ್ನಿಂಗ್ಸ್ ನ 41ನೇ ಓವರ್ ನಲ್ಲಿ ಬೋಲ್ಯಾಂಡ್ ಎಸೆದ ಮೊದಲ ಎಸೆತವನ್ನು ಯಶಸ್ವಿ ಜೈಸ್ವಾಲ್ ಮಿಡ್ ಆನ್ ನತ್ತ ತಳ್ಳಿ ಸಿಂಗಲ್ ಕದಿಯುವ ಸಾಹಸಕ್ಕೆ ಮುಂದಾದರು. ಜೈಸ್ವಾಲ್ ಓಡಿದರೂ ಅದಾಗಲೇ ಚೆಂಡು ಫೀಲ್ಜರ್ ಕೈಸೇರಿದ್ದರಿಂದ ಕೊಹ್ಲಿ ರನ್ ಗೆ ಮುಂದಾಗಲಿಲ್ಲ. ಈ ವೇಳೆ ಗೊಂದಲ ಉಂಟಾಗಿ ಜೈಸ್ವಾಲ್ ರನೌಟ್ ಗೆ ಬಲಿಯಾದರು.
ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಜಟಾಪಟಿ!
ಇನ್ನು ದಿನದಾಟ ಮುಕ್ತಾಯದ ಬಳಿಕ ಇದೇ ವಿಚಾರವಾಗಿ ವೀಕ್ಷಕ ವಿಶ್ಲೇಷಕರಾಗಿದ್ದ ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಜಟಾಪಟಿ ನಡೆಸಿದ್ದಾರೆ. 'ಚೆಂಡು ನಿಧಾನವಾಗಿ ಹೋಗುತ್ತಿತ್ತು. ಹೀಗಾಗಿ ಕೊಹ್ಲಿ ಓಡಿದ್ದರೆ ರನೌಟ್ ಆಗುತ್ತಿದ್ದರು ಎಂದು ನಾನು ಭಾವಿಸುವುದಿಲ್ಲ. ಅದು ಜೈಸ್ವಾಲ್ ಅವರ ಕರೆಯಾಗಿತ್ತು. ಬಹುಶಃ ಅಪಾಯಕಾರಿ ರನ್ ಆಗಿರಬಹುದು.
ಆದರೆ ಕೊಹ್ಲಿಗೆ ಅಪಾಯವಿರಲಿಲ್ಲ, ಜೈಸ್ವಾಲ್ ಡೇಂಜರ್ ಎಂಡ್‌ನಲ್ಲಿದ್ದರು. ವಿರಾಟ್ ಗೊಂದಲದಿಂದಾಗಿಯೇ ಜೈಸ್ವಾಲ್ ಔಟಾಗಿದ್ದು, ಒಂದು ವೇಳೆ ಜೈಸ್ವಾಲ್ ಅವರದ್ದು ಕೆಟ್ಟ ನಿರ್ಧಾರ ಆಗಿದ್ದರೆ, ಅವರು ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಔಟ್ ಆಗುತ್ತಿದ್ದರು" ಎಂದು ಮಂಜ್ರೇಕರ್ ಹೇಳಿದರು.
ಇದಕ್ಕೆ ಉತ್ತರಿಸಿದ ಇರ್ಫಾನ್ ಪಠಾಣ್, 'ಫೀಲ್ಡರ್ ಪ್ಯಾಟ್ ಕಮ್ಮಿನ್ಸ್‌ಗೆ ಚೆಂಡು ಎಷ್ಟು ವೇಗವಾಗಿ ಹೋಯಿತು ಎಂಬುದನ್ನು ನೋಡಿದ ಕೊಹ್ಲಿ ರನ್ ತೆಗೆದುಕೊಳ್ಳುವ ಬಗ್ಗೆ ಬಹುಶಃ ಆತ್ಮವಿಶ್ವಾಸ ಕಳೆದುಕೊಂಡಿರಬಹುದು. ನಾನ್-ಸ್ಟ್ರೈಕರ್ ಆಗಿ ವಿರಾಟ್‌ಗೆ ಇದು ಅಪಾಯ ಎಂದು ಭಾವಿಸಿದರೆ ರನ್ ನಿರಾಕರಿಸುವ ಹಕ್ಕಿದೆ ಎಂದು ವಾದಿಸಿದರು.
ಈ ವೇಳೆ ಇಬ್ಬರೂ ಪರಸ್ಪರ ತಮ್ಮ ವಾದ ಮಂಡಿಸುತ್ತಿದ್ದಾಗ ಕೊಂಚ ಗೊಂದಲ ಏರ್ಪಟ್ಟಿತು. ಇಬ್ಬರೂ ಒಬ್ಬರ ಮಾತು ಒಬ್ಬರು ಕೇಳದೆ ತಮ್ಮದೇ ಅಭಿಪ್ರಾಯ ಮಂಡಿಸುತ್ತಿದ್ದರು. ಇರ್ಫಾನ್ ತಮ್ಮ ಅಭಿಪ್ರಾಯವನ್ನು ಮುಂದುವರೆಸುತ್ತಿದ್ದಂತೆ ಮಂಜ್ರೇಕರ್ ಸಹ ತಾಳ್ಮೆ ಕಳೆದುಕೊಂಡು "ನೀವು ನನಗೆ ಮಾತನಾಡಲು ಬಿಡದಿದ್ದರೆ ಪರವಾಗಿಲ್ಲ" ಎಂದು ಹೇಳಿದರು. ಅಂತೆಯೇ "ರನ್ ಆಗಿದೆಯೋ ಇಲ್ಲವೋ ಎಂಬುದರ ಕುರಿತು ಅವರ ಹೊಸ ವ್ಯಾಖ್ಯಾನವನ್ನು ತರಬೇತಿ ಕೈಪಿಡಿಯಲ್ಲಿ ಇರ್ಫಾನ್ ಪಠಾಣ್ ವಾದವನ್ನು ಸೇರಿಸಬೇಕು'' ಎಂದರು.
ಬಳಿಕ ಚರ್ಚೆ ಮುಂದುವರೆಸಿದ ಮಂಜ್ರೇಕರ್, 'ಜೈಸ್ವಾಲ್ ಔಟ್‌ನಲ್ಲಿ ಪಾತ್ರವಹಿಸಿದ ನಂತರ ಕೊಹ್ಲಿ ಔಟ್ ಆಗಲು ಅವರು ಅನುಭವಿಸಿರಬಹುದಾದ 'ಅಪರಾಧ' ಕಾರಣ ಎಂದು ಮಾರ್ಮಿಕವಾಗಿ ಹೇಳಿದರು. "ಕೊಹ್ಲಿ ಔಟ್ ಆಗಲು ಜೈಸ್ವಾಲ್ ರನೌಟ್ ಆದ ಬಗ್ಗೆ ಅವರ ಹೃದಯದಲ್ಲಿ ಇದ್ದ ಅಪರಾಧ ಭಾವನೆಯೂ ಕಾರಣವಾಗಿರಬಹುದು. ಅಲ್ಲಿಯವರೆಗೆ ಅವರು ಔಟ್-ಆಫ್ ಎಸೆತಗಳನ್ನು ಬಿಡುತ್ತಿದ್ದರು. ಆದರೆ ರನ್-ಔಟ್ ಘಟನೆಯ ನಂತರ ಅವರ ಏಕಾಗ್ರತೆಯನ್ನು ಕಳೆದುಕೊಂಡರು ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟರು.