ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ, ಭಾರತ-ಪಾಕ್ ಪಂದ್ಯಕ್ಕೆ ಡೇಟ್ ಫಿಕ್ಸ್..!

Srinivasamurthy VN

ದುಬೈ: ಹಾಲಿ ವರ್ಷದ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳ ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಹೂರ್ತ ಫಿಕ್ಸ್ ಆಗಿದೆ.

ಹೌದು.. ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ಆಯೋಜನೆಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಐದು ತಿಂಗಳ ಮುಂಚೆಯೇ ಟಿ20 ವರ್ಲ್ಡ್‌ಕಪ್ ವೇಳಾಪಟ್ಟಿ ರಿಲೀಸ್ ಆಗಿದೆ. ಜೂನ್ 5ರಿಂದ ಜೂನ್ 29ರವರೆಗೆ ಅಂದ್ರೆ 25 ದಿನ ದಿನಗಳ ಕಾಲ ಟಿ20 ವಿಶ್ವಕಪ್ ನಡೆಯಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ವೇಳಾಪಟ್ಟಿ ಅನ್ವಯ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 9ರಂದು ಭಾನುವಾರ ನ್ಯೂಯಾರ್ಕ್‌ನಲ್ಲಿ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಐಸಿಸಿ, ಭಾನುವಾರದಂದು ಭಾರತ-ಪಾಕ್ ಪಂದ್ಯ ಆಯೋಜಿಸಿರುವುದು ವಿಶೇಷವಾಗಿದೆ.

ಇನ್ನು ಜೂನ್ 12ರಂದು ಭಾರತ-ಅಮೇರಿಕಾ ಮತ್ತು ಜೂನ್ 15ರಂದು ಭಾರತ-ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ತನ್ನೆಲ್ಲಾ ಲೀಗ್ ಪಂದ್ಯಗಳನ್ನ ಅಮೇರಿಕಾದಲ್ಲಿ ಆಡಲಿದೆ. ನ್ಯೂಯಾರ್ಕ್ನಲ್ಲಿ ಮೂರು ಪಂದ್ಯ ಮತ್ತು ಫ್ಲೋರಿಡಾದಲ್ಲಿ ಒಂದು ಪಂದ್ಯ ನಡೆಯಲಿದೆ.

ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬರೋಬ್ಬರಿ 20 ತಂಡಗಳು ಕಣಕ್ಕಿಳಿಯಲಿವೆ. ತಲಾ 5 ತಂಡಗಳಿರುವ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪುಗಳಿಂದ 2 ತಂಡಗಳು ಸೂಪರ್-8 ಹಂತಕ್ಕೇರಲಿದೆ. ಈ ಹಂತದಲ್ಲಿ 8 ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, ಇದರಲ್ಲಿ ಅಗ್ರ ನಾಲ್ಕು ಟೀಮ್ಸ್ ಸೆಮಿಫೈನಲ್‌ಗೆ ಎಂಟ್ರಿಕೊಡಲಿವೆ. ಸೆಮಿಸ್‌ನಲ್ಲಿ ಗೆದ್ದ ಟೀಮ್ಸ್ ಫೈನಲ್ ಪ್ರವೇಶಿಸಲಿವೆ.

ವೆಸ್ಟ್ ಇಂಡೀಸ್ನಲ್ಲಿ ಭಾರತದ ಸೂಪರ್-8 ಪಂದ್ಯಗಳು
2024ರ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆಯೋಜಿಸಲಿದೆ. ಲೀಗ್ ಹಂತದ ಪಂದ್ಯಗಳು ಯುಎಸ್ಎನಲ್ಲಿ ನಡೆಯಲಿವೆ. ಹಾಗೆಯೇ ಸೂಪರ್-8 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯವಹಿಸಲಿದೆ. ಹಾಗಾಗಿ ಭಾರತ ಸಹ ವಿಂಡೀಸ್‌ನಲ್ಲೇ ಸೂಪರ್-8 ಮ್ಯಾಚ್‌ಗಳನ್ನಾಡಲಿದೆ. ಇನ್ನು ಫೈನಲ್ ಪಂದ್ಯಕ್ಕೂ ಕೆರಿಬಿಯನ್ ರಾಷ್ಟ್ರ ಆತಿಥ್ಯ ವಹಿಸಲಿದೆ. ಬಾರ್ಬಡಾಸ್‌ನಲ್ಲಿ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.

SCROLL FOR NEXT