ಪಳ್ಳೆಕೆಲೆ: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಆ ಮೂಲಕ ಭಾರತಕ್ಕೆ ಗೆಲ್ಲಲು 162 ರನ್ ಗಳ ಸವಾಲಿನ ಗುರಿ ನೀಡಿತು.
ಈ ಮೊತ್ತವನ್ನು ಬೆನ್ನು ಹತ್ತುವ ವೇಳೆ ಭಾರತದ ಇನ್ನಿಂಗ್ಸ್ ವೇಳೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತದ ಗುರಿಯನ್ನು ಅಂಪೈರ್ ಗಳು ಪರಿಷ್ಕರಿಸಿದರು.
ಅದರಂತೆ ಮಳೆಯಿಂದಾಗಿ ಕೇವಲ 8 ಓವರ್ ಗಳಿಗೆ ಭಾರತದ ಇನ್ನಿಂಗ್ಸ್ ಸೀಮಿತವಾಯಿತು. ಅಂತೆಯೇ ಭಾರತಕ್ಕೆ ಗೆಲ್ಲಲು 78 ರನ್ ಗಳ ಗುರಿ ನಿಗದಿ ಪಡಿಸಲಾಯಿತು. ಈ ಮೊತ್ತವನ್ನು ಸುಲಭವಾಗಿ ಭಾರತ ಗುರಿಮುಟ್ಟಿತಾದರೂ ಈ ಹಂತದಲ್ಲಿ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡಿತು.
ಕೇವಲ 15 ಎಸೆತಗಳಲ್ಲಿ 30 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಹಸರಂಗ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರೆ, ಸಂಜು ಸ್ಯಾಮ್ಸನ್ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು. ನಾಯಕ ಸೂರ್ಯ ಕುಮಾರ್ ಯಾದವ್ 12 ಎಸೆತಗಳಲ್ಲಿ 26 ರನ್ ಗಳಿಸಿ ಪತಿರಾಣಾಗೆ ವಿಕೆಟ್ ಒಪ್ಪಿಸಿದರು.
ಬಳಿಕ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯಾ (ಅಜೇಯ 22 ರನ್) ಮತ್ತು ರಿಷಬ್ ಪಂತ್ (ಅಜೇಯ 2 ರನ್) ಗೆಲುವಿನ ಔಪಚಾರಿಕತೆ ಮುಗಿಸಿದರು.
ಸರಣಿ ಭಾರತದ ಕೈವಶ
ಇನ್ನು ನಿನ್ನೆ ಮೊದಲನೇ ಪಂದ್ಯ ಗೆದ್ದಿದ್ದ ಭಾರತ ತಂಡ ಇಂದು 2ನೇ ಪಂದ್ಯವನ್ನೂ ಗೆಲ್ಲುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಕೈವಶ ಮಾಡಿಕೊಂಡಿದೆ.