ನವದೆಹಲಿ: ಕನ್ನಡಿಗ, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡವು ಕೆರೀಬಿಯನ್ ನೆಲದಲ್ಲಿ ಟಿ-20 ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ರಾಹುಲ್ ತಮ್ಮ ಕೋಚ್ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ.
ಕ್ರಿಕೆಟ್ ಲೋಕದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಈ ಟಿ-20 ವಿಶ್ವಕಪ್ ಗೆಲುವು ವಿಶೇಷವಾದದ್ದು, 2007ರಲ್ಲಿ ಇದೇ ಕೆರೀಬಿಯನ್ ನಾಡಿನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಹೀನಾಯವಾಗಿತ್ತು. ಸೋತಿತ್ತು. ಆಗ ರಾಹುಲ್ ದ್ರಾವಿಡ್ ನಾಯಕರಾಗಿದ್ದರು. ಆ ಸೋಲಿಗಾಗಿ ಟೀವ್ರ ಆಕ್ರೋಶವನ್ನು ಎದುರಿಸಿದ್ದರು. ಇದೀಗ ಅದೇ ಮೈದಾನದಲ್ಲಿ ಭಾರತ ತಂಡ ಟಿ-20 ಟ್ರೋಫಿ ಮುಡಿಗೇರಿಸಿಕೊಂಡಿದೆ.
ಟ್ರೋಫಿ ಹಿಡಿದು ಸಂಭ್ರಮಿಸಿದ ರಾಹುಲ್: ಎಂತಹ ಸಂದರ್ಭಗಳಲ್ಲಿಯೂ ತಮ್ಮ ಭಾವನೆಗಳನ್ನು ಹೊರಗೆ ತೋರಿಸದ ದ್ರಾವಿಡ್ ಟ್ರೋಫಿ ಹಿಡಿದು ಸಂಭ್ರಮಿಸಿದ್ದಾರೆ. ಇದನ್ನು ಕಂಡ ಕ್ರಿಕೆಟ್ ಲೋಕ ಕೂಡ ಅಚ್ಚರಿಕೊಂಡಿದೆ. ಈ ಟ್ರೋಫಿ ಸಲುವಾಗಿ ಪಟ್ಟ ಕಷ್ಟ ಎಲ್ಲವನ್ನೂ ಮರೆಸುವಂತೆ ಚಿಕ್ಕ ಮಕ್ಕಳಂತೆ ದ್ರಾವಿಡ್ ಆಟಗಾರರೊಂದಿಗೆ ಸಂಭ್ರಮಿಸಿದ್ದಾರೆ. ಟಿ-20 ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ ದ್ರಾವಿಡ್, ಒಬ್ಬ ಆಟಗಾರನಾಗಿ, ನಾನು ಟ್ರೋಫಿ ಗೆಲ್ಲುವ ಅದೃಷ್ಟ ಹೊಂದಿರಲಿಲ್ಲ. ಆದರೆ, ಕೋಚ್ ಆಗಿ ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ ಇದು ಉತ್ತಮ ಪಯಾಣವಾಗಿದೆ ಎಂದಿದ್ದಾರೆ.
ಮುಂದಿನ ಕೋಚ್ ಯಾರು? ರಾಹುಲ್ ದ್ರಾವಿಡ್ ನಿರ್ಗಮನದೊಂದಿಗೆ ಇದೀಗ ಮುಂದಿನ ಭಾರತದ ಕೋಚ್ ಯಾರು ಎಂಬುದರತ್ತ ಎಲ್ಲಾರ ಕಣ್ಣು ನೆಟ್ಟಿದೆ. ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಮುಂಚೂಣಿಯಲ್ಲಿದ್ದಾರೆ. ಅವರ ಸಂಭಾವ್ಯ ನೇಮಕಾತಿಯು ಗಮನಾರ್ಹ ಆಸಕ್ತಿ ಮತ್ತು ಬೆಂಬಲ ಗಳಿಸಿದೆ. ಗೌತಮ್ ಗಂಭೀರ್ ಎಲ್ಲಾ ಸ್ವರೂಪಗಳಲ್ಲಿ ಅನುಭವ ಹೊಂದಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಟೆಸ್ಟ್, ಏಕದಿನ ಮತ್ತು T20 ಪಂದ್ಯಗಳಲ್ಲಿ ಗಂಭೀರ್ ಅಪಾರ ಅನುಭವ ಹೊಂದಿದ್ದಾರೆ. ಈ ಅನುಭವವೇ ಈ ಹೊತ್ತಿನಲ್ಲಿ ಭಾರತೀಯ ಕ್ರಿಕೆಟ್‌ಗೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2011ರ ಭಾರತ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಆಟಗಾರರಾದ ಗಂಭೀರ್ ಅವರೇ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದು, ಇದೊಂದು ಗೌರವ ಎಂದು ಬಣ್ಣಿಸಿದ್ದಾರೆ. ಆದರೆ, ದ್ರಾವಿಡ್ ಬದಲಿಗೆ ಬರುವ ಸಾಧ್ಯತೆಯ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ. T20 ವಿಶ್ವಕಪ್ ಗೆಲುವಿನೊಂದಿಗೆ T20 ಮಾದರಿಯ ಕ್ರಿಕೆಟ್ ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ವಿದಾಯ ಘೋಷಣೆಯೊಂದಿಗೆ ಭಾರತೀಯ ಕ್ರಿಕೆಟ್‌ಗೆ ಒಂದು ಯುಗದ ಅಂತ್ಯ ಕಂಡಿದೆ.
ಈ ಅನುಭವಿಗಳ ಕೊಡುಗೆ ಅಪಾರ ಎಂದಿರುವ ಬಿನ್ನಿ, ಅವರ ಬದಲಿ ಆಟಗಾರರನ್ನು ಹುಡುಕುವ ಸವಾಲನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ತಕ್ಷಣವೇ ಬದಲಾಯಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಇದು ಸದ್ಯಕ್ಕೆ ದೊಡ್ಡ ನಷ್ಟವಾಗಿದೆ, ಆದರೆ ಐಪಿಎಲ್ ನಿಂದ ಯುವ ಪ್ರತಿಭೆಗಳನ್ನು ಗುರುತಿಸಬಹುದು ಎಂದು ಅವರು ಹೇಳಿದ್ದಾರೆ.