ಬಾರ್ಬಡೋಸ್: T-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿದ ಭಾರತ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು. ಜೊತೆಗೆ 13 ವರ್ಷಗಳ ಟ್ರೋಪಿ ಬರ ಕೂಡಾ ನೀಗಿದೆ. ಇದಕ್ಕೆ ಕಾರಣವಾದ ಬಾರ್ಬಡೋಸ್ ಕ್ರೀಡಾಂಗಣದ ಪಿಚ್ ನ ಒಂದು ಚಿಟಿಕೆ ಮಣ್ಣನ್ನು ರೋಹಿತ್ ಶರ್ಮಾ ಬಾಯಲ್ಲಿ ಹಾಕುವ ಮೂಲಕ ಧನ್ಯತೆ ಅರ್ಪಿಸಿದ್ದಾರೆ. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಪ್ರತಿ ವಿಂಬಲ್ಡನ್ ಗೆಲುವಿನ ನಂತರ ಟೆನಿಸ್ ದಂತಕಥೆ ನೊವಾಜ್ ಜೊಕೊವಿಕ್ ಮೈದಾನದಲ್ಲಿ ಒಂದೆರಡು ಹುಲ್ಲು ತಿನ್ನುತ್ತಾರೆ. ಅವರು 2018 ರಿಂದ ಹುಲ್ಲು ತಿನ್ನುವ ಮೂಲಕ ತಮ್ಮ ವಿಂಬಲ್ಡನ್ ವಿಜಯೋತ್ಸವ ಆಚರಿಸುತ್ತಾರೆ. ಆದೇ ರೀತಿ ಇದೀಗ ರೋಹಿತ್ ಶರ್ಮಾ ಕೂಡಾ ಪಿಚ್ ನ ಮಣ್ಣನ್ನು ತಿನ್ನುವ ಮೂಲಕ ಧನ್ಯತೆ ಅರ್ಪಿಸಿದ್ದಾರೆ.
ಬಳಿಕ ನಾಯಕ ಮತ್ತು ಆಟಗಾರನಾಗಿ ಟಿ-20 ಮಾದರಿಗೆ ರೋಹಿತ್ ಶರ್ಮಾ ವಿದಾಯ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ-20 ಪಂದ್ಯ. ಈ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಯಕನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ-20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್, 4231 ರನ್ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.