ಚಾಂಪಿಯನ್ ಭಾರತ ತಂಡ
ಚಾಂಪಿಯನ್ ಭಾರತ ತಂಡ 
ಕ್ರಿಕೆಟ್

ICC World Test Championship: ಅಗ್ರ ಸ್ಥಾನಕ್ಕೇರಿದ ಭಾರತ; ಪಾಕಿಸ್ತಾನ ಹಿಂದಿಕ್ಕಿದ ಬಾಂಗ್ಲಾದೇಶ

Srinivasamurthy VN

ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 64 ರನ್ ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಕೈವಶ ಮಾಡಿಕೊಂಡಿದ್ದು ಮಾತ್ರವಲ್ಲದೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕ ಪಟ್ಟಿಯಲ್ಲೂ ಅಗ್ರ ಸ್ಥಾನಕ್ಕೇರಿದೆ.

ಧರ್ಮಶಾಲಾದಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 64 ರನ್​ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಹೈದರಾಬಾದ್​ನಲ್ಲಿ ನಡೆದ ಆರಂಭಿಕ ಟೆಸ್ಟ್​ನಲ್ಲಿ ಸೋತ ನಂತರ ಭಾರತವು ಮುಂದಿನ ನಾಲ್ಕು ಪಂದ್ಯಗಳನ್ನು ನಿರಾಯಸವಾಗಿ ಗೆದ್ದುಕೊಂಡಿತು.

ಈ ಗೆಲುವಿನೊಂದಿಗೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನ ಪಾಯಿಂಟ್ಸ್ ಟೇಬಲ್​​ನಲ್ಲಿ (WTC Point Table) ಅಗ್ರಸ್ಥಾನಕ್ಕೇರಿದೆ. ಮಾತ್ರವಲ್ಲದೇ ಭರ್ಜರಿ ಗೆಲುವಿನೊಂದಿಗೆ ಪಟ್ಟಿಯಲ್ಲಿನ ಅಂಕಗಳ ಶೇಕಡಾವಾರು ಅನುಪಾತವನ್ನು ಸುಧಾರಿಸಿಕೊಂಡಿದೆ.

ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ

ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಭಾರತ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಭಾರತ ಒಟ್ಟು 12 ನಿರ್ಣಾಯಕ ಅಂಕಗಳನ್ನು ತನ್ನ ಖಾತೆಗೆ ಸೇರಿಕೊಂಡಿದೆ. ಒಟ್ಟಾರೆ 74 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಭಾರತ ತಂಡ ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು, 2 ಸೋಲು ಹಾಗೂ 1 ಡ್ರಾ ಸಾಧಿಸಿರುವ ರೋಹಿತ್ ಶರ್ಮಾ ಪಡೆ 68.51ರ ಸರಾಸರಿಯಲ್ಲಿ ಅಗ್ರಸ್ಥಾನದಲ್ಲಿದೆ.

ಏತನ್ಮಧ್ಯೆ, ಇಂಗ್ಲೆಂಡ್ ಇದುವರೆಗೆ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ ಆರು ಮುಖಾಮುಖಿಗಳಲ್ಲಿ ಸೋಲುಗಳನ್ನು ಎದುರಿಸಿದೆ. 17.50 ಪಾಯಿಂಟ್​ನೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದಿದೆ. ಭಾರತ ತಂಡಕ್ಕಿಂತ ಸ್ವಲ್ಪ ಕೆಳಗಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರಸ್ತುತ ನಡೆಯುತ್ತಿರುವ ಸರಣಿಯ ಅಂತ್ಯದ ವೇಳೆಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಎದುರು ನೋಡುತ್ತಿವೆ.

WTC ಅಂಕ ಪಟ್ಟಿಯ ಪ್ರಕಾರ, ಭಾರತ ತಂಡ 64.58 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್ (60) 2ನೇ ಸ್ಥಾನ, ಆಸ್ಟ್ರೇಲಿಯಾ (59.09) 3ನೇ ಸ್ಥಾನದಲ್ಲಿದೆ.

ಪಾಕಿಸ್ತಾನ ಹಿಂದಿಕ್ಕಿದ ಬಾಂಗ್ಲಾದೇಶ

ಇನ್ನು ಅಚ್ಚರಿ ಎಂಬಂತೆ ಪಟ್ಟಿಯಲ್ಲಿ ಪಾಕಿಸ್ತಾನ ತಂಡವನ್ನು ಬಾಂಗ್ಲಾದೇಶ ಹಿಂದಿಕ್ಕಿದೆ. 1 ಗೆಲುವು ಮತ್ತು 1 ಸೋಲು ಕಂಡಿರುವ ಬಾಂಗ್ಲಾದೇಶ ಒಟ್ಟು 12 ಅಂಕಗಳೊಂದಿಗೆ ಶೇ.50 ಗೆಲುವಿನ ಸರಾಸರಿಯೊಂದಿಗೆ 4ನೇ ಸ್ಥಾನಕ್ಕೇರಿದ್ದು, 5 ಪಂದ್ಯಗಳನ್ನಾಡಿ 2 ಗೆಲುವು 3 ಸೋಲು ಕಂಡಿರುವ ಪಾಕಿಸ್ತಾನ 22 ಅಂಕಗಳೊಂದಿಗೆ ಶೇ.36.66 ಸರಾಸರಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ.

ಭಾರತದ ಮುಂದಿನ ಸವಾಲಿನ ಸರಣಿಗಳು

ಕ್ರೈಸ್ಟ್​ಚರ್ಚ್​​ನ ಹ್ಯಾಗ್ಲಿ ಓವಲ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​​ನತ್ತ ಈಗ ಗಮನ ಕೇಂದ್ರೀಕರಣಗೊಂಡಿದೆ. ಅದೇ ರೀತಿ ಭಾರತಕ್ಕೆ ಮುಂಬರುವ ಟೆಸ್ಟ್​​ ಸವಾಲುಗಳು ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಎದುರಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಕೂಡ ರೋಹಿತ್ ಶರ್ಮಾ ಪಡೆಗೆ ನಿರ್ಣಾಯಕವಾಗಲಿದೆ.

SCROLL FOR NEXT