ಅಶ್ವಿನಿ ಪುನೀತ್ ರಾಜ್‌ಕುಮಾರ್
ಅಶ್ವಿನಿ ಪುನೀತ್ ರಾಜ್‌ಕುಮಾರ್  
ಕ್ರಿಕೆಟ್

RCB ಹೆಸರು ಬದಲಾವಣೆ: ರಿಷಬ್ ಶೆಟ್ಟಿ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

Ramyashree GN

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಐಪಿಎಲ್ 2024ರ ಆವೃತ್ತಿಯ ಆರಂಭಿಕ ಪಂದ್ಯವನ್ನು ಆಡಲಿದ್ದು, ಅದಕ್ಕೂ ಮೊದಲು ಫ್ರಾಂಚೈಸಿ ತನ್ನ ಹೆಸರನ್ನು ಬದಲಾಯಿಸಲು ಸಿದ್ಧವಾಗಿದೆ.

ಆರ್‌ಸಿಬಿ ಫ್ರಾಂಚೈಸಿ ಟಿ20 ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದೆ. ಬೆಂಗಳೂರು ಮತ್ತು ಭಾರತದಾದ್ಯಂತ ದೊಡ್ಡ ಮತ್ತು ಭಾವೋದ್ರಿಕ್ತ ಅಭಿಮಾನಿ ಬಳಗವನ್ನು ಹೊಂದಿದೆ. ಐಪಿಎಲ್ 2024ರ ಆರಂಭದೊಂದಿಗೆ, ಮುಂಬರುವ ಋತುವಿನಲ್ಲಿ ಹೊಸ ಹೆಸರನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಐಪಿಎಲ್ ಆರಂಭಕ್ಕಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯಾದರೂ ಆರ್‌ಸಿಬಿಯ ಲಕ್ ಬದಲಾಗಬಹುದು ಎಂದು ಎದುರುನೋಡುತ್ತಿದ್ದಾರೆ. ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಫ್ರಾಂಚೈಸಿ ಸಿಹಿಸುದ್ದಿ ನೀಡಿದೆ. Royal Challengers Bangalore ಇನ್ಮುಂದೆ Royal Challengers Bengaluru ಆಗಿ ಬದಲಾಗಲಿದೆ ಎನ್ನುವ ಸುಳಿವು ಸಿಕ್ಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಎಕ್ಸ್ ಖಾತೆಯಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, Royal Challengers Bangalore ಎಂದು ಟೈಪ್ ಮಾಡಿದ ಬಳಿಕ Bangalore ಪದವನ್ನು ಅಳಿಸಿ ಅರ್ಥ ಆಯ್ತಾ ಎಂದು ಕೇಳಉವುದನ್ನು ಕಾಣಬಹುದು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಿಸುವ ಸುಳಿವು ನೀಡಲಾಗಿದೆ.

ನಿನ್ನೆಯಷ್ಟೇ ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರಿದ್ದ ವಿಡಿಯೋವನ್ನು ಹಂಚಿಕೊಂಡಿದ್ದ ಆರ್‌ಸಿಬಿ, ಹೆಸರು ಬದಲಿಸುವ ಸೂಚನೆ ನೀಡುವ ಮೂಲಕ ಅಭಿಮಾನಿಗಳ ಪ್ರೀತಿಗೆ ಸೋತಿತ್ತು.

ಕರ್ನಾಟಕ ಸರ್ಕಾರವು ಅಧಿಕೃತವಾಗಿ ನಗರದ ಹೆಸರನ್ನು Bangalore ನಿಂದ Bengaluru ಎಂದು 2014ರಲ್ಲಿ ಮರುನಾಮಕರಣ ಮಾಡಿತು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಕೂಡ ತನ್ನ ಹೆಸರನ್ನು ಬದಲಿಸಬೇಕು ಎನ್ನುವುದು ಅಭಿಮಾನಿಗಳ ಆಶಯವಾಗಿತ್ತು. ಇದಾದ 10 ವರ್ಷಗಳ ನಂತರ ಕೊನೆಗೂ ಹೆಸರು ಬದಲಿಸುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿವೆ.

ಐಪಿಎಲ್ 2024ರ ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್​ಸಿಬಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್‌ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಅನ್‌ಬಾಕ್ಸ್ ಕಾರ್ಯಕ್ರಮಕ್ಕಾಗಿ ಆರ್‌ಬಿಸಿ ಈಗಾಗಲೇ ಟಿಕೆಟ್ ಮಾರಾಟ ಆರಂಭಿಸಿದೆ. ಮಾರ್ಚ್ 19ರಂದು ಕಾರ್ಯಕ್ರಮ ನಡೆಯಲಿದ್ದು, ಇದೇ ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರು ಬದಲಿಸುವ ಘೋಷಣೆಯನ್ನು ಮಾಡಲಿದೆ ಎನ್ನುವ ಸುಳಿವನ್ನು ನೀಡಲಾಗಿದೆ.

SCROLL FOR NEXT