ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2024, RCB vs KKR: ವಿರಾಟ್ ಕೊಹ್ಲಿ ಒಬ್ಬರೇ ಆಡಿದ್ರೆ ಸಾಕಾ?; ಸುನೀಲ್ ಗವಾಸ್ಕರ್ ಕಿಡಿ!

Ramyashree GN

ಐಪಿಎಲ್ 2024ರ ಆವೃತ್ತಿಯ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಮತ್ತೊಂದು ಅರ್ಧ ಶತಕ ಗಳಿಸಿದರು. ಆದರೆ, ಆರ್‌ಸಿಬಿ ತಂಡವು ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿತು. ಆರ್‌ಸಿಬಿ ಇದೀಗ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದೆ.

ಶುಕ್ರವಾರ, ಕೊಹ್ಲಿ 59 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದರು. ಇತರ ಯಾವುದೇ ಆರ್‌ಸಿಬಿ ಬ್ಯಾಟರ್‌ಗಳು 35 ರನ್ ಗಳಿಸಲು ಕೂಡ ಸಾಧ್ಯವಾಗಲಿಲ್ಲ. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆದರೆ, ಕೆಕೆಆರ್ ಕೇವಲ 16.5 ಓವರ್‌ಗಳಲ್ಲಿಯೇ ತನ್ನ ಗುರಿಯನ್ನು ತಲುಪಿತು.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಈ ಸೋಲಿನ ನಂತರ ಆರ್‌ಸಿಬಿ ಬ್ಯಾಟರ್‌ಗಳ ವಿರುದ್ಧ ಕಿಡಿಕಾರಿದ್ದಾರೆ.

'ಕೊಹ್ಲಿ ಒಬ್ಬರೇ ಏಕಾಂಗಿಯಾಗಿ ಎಷ್ಟು ಆಡುತ್ತಾರೆ. ನೀವು ಯಾರಾದರೂ ಅವರೊಂದಿಗೆ ಬೆಂಬಲಕ್ಕೆ ನಿಲ್ಲಬೇಕು. ನಿನ್ನೆ ನಡೆದ ಪಂದ್ಯದಲ್ಲಿ ಯಾರಾದರೂ ಅವರನ್ನು ಬೆಂಬಲಿಸಿದ್ದರೆ, ಅವರು ಖಂಡಿತವಾಗಿಯೂ 83ರ ಬದಲು 120 ರನ್ ಗಳಿಸುತ್ತಿದ್ದರು. ಇದು ತಂಡದ ಆಟವಾಗಿದ್ದು, ಯಾವುದೇ ಓರ್ವ ವ್ಯಕ್ತಿಯ ಆಟವಲ್ಲ. ಈ ಪಂದ್ಯದಲ್ಲಿ ಇತರ ಯಾವೊಬ್ಬ ಬ್ಯಾಟರ್‌ನಿಂದ ಅವರಿಗೆ ಬೆಂಬಲ ಸಿಗಲಿಲ್ಲ' ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

ಸುನೀಲ್ ಗವಾಸ್ಕರ್

ಕೇವಲ 59 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸುವ ಮೂಲಕ ಕೊಹ್ಲಿ ಅಜೇಯ 83 ರನ್ ಗಳಿಸಿದ ಅಪೂರ್ವ ಕ್ಷಣಕ್ಕೆ ಎಂ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೊಮ್ಮೆ ಸಾಕ್ಷಿಯಾಯಿತು. ಆದರೆ, ಪಂದ್ಯ ಮಾತ್ರ ತಂಡದ ಕೈತಪ್ಪಿತು. ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಯಿತು.

ಕೊಹ್ಲಿ ವಿಶಿಷ್ಠ ಸಾಧನೆ

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೂಡ ಕೊಹ್ಲಿ ವಿಶೇಷ ದಾಖಲೆ ಬರೆದರು. ಆರ್‌ಸಿಬಿ ತಂಡಕ್ಕಾಗಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡರು. ಕ್ರಿಸ್ ಗೇಲ್ ದಾಖಲೆ ಮುರಿದ ಕೊಹ್ಲಿ ಇದೀಗ ಮೊದಲ ಸ್ಥಾನಕ್ಕೇರಿದ್ದಾರೆ.

ಆರ್​​ಸಿಬಿ ತಂಡದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು

ವಿರಾಟ್ ಕೊಹ್ಲಿ- 241 ಸಿಕ್ಸರ್

ಕ್ರಿಸ್ ಗೇಲ್- 239 ಸಿಕ್ಸರ್

ಎಬಿ ಡಿವಿಲಿಯರ್ಸ್- 238 ಸಿಕ್ಸರ್

ಗ್ಲೆನ್ ಮ್ಯಾಕ್ಸ್‌ವೆಲ್- 67 ಸಿಕ್ಸರ್

ಫಾಫ್ ಡು ಪ್ಲೆಸಿಸ್- 50 ಸಿಕ್ಸರ್

SCROLL FOR NEXT