ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಆರ್ ಸಿಬಿ ಮತ್ತು ಸಿಎಸ್ ಕೆ ನಡುವಣ ಕಾದಾಟದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಸೃಷ್ಟಿಗೆ ಸಜ್ಜಾಗಿದ್ದಾರೆ. ಹೌದು. ಐಪಿಎಲ್ ಇತಿಹಾಸದಲ್ಲಿ 8, 000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲು ಕೊಹ್ಲಿಗೆ 76 ರನ್ ಬೇಕಿದೆ.
ಸದ್ಯಕ್ಕೆ, ಐಪಿಎಲ್‌ನಲ್ಲಿ 250 ಪಂದ್ಯಗಳು ಮತ್ತು 242 ಇನ್ನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿ 131.8 ಸ್ಟ್ರೈಕ್ ರೇಟ್‌ನಲ್ಲಿ 7, 924 ರನ್ ಗಳಿಸಿದ್ದಾರೆ. ಅವರು 8 ಶತಕ ಮತ್ತು 55 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಯಾವಾಗಲೂ ಆದ್ಬುತ ಪ್ರದರ್ಶನ ತೋರುವ ಕೊಹ್ಲಿ, ಸಿಎಸ್ ಕೆ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ಮಿಂಚಿದರೆ ಮತ್ತೊಂದು ದಾಖಲೆ ಸೃಷ್ಟಿಯಾಗುವಲ್ಲಿ ಅಚ್ಚರಿಯಿಲ್ಲ. ಈ ಹಿಂದೆ ಇದೇ ದಿನದಂದು ಎರಡು ಶತಕ ಹಾಗ ಒಂದು ಅರ್ಧ ಶತಕ ಗಳಿಸಿದ್ದಾರೆ.
ಐಪಿಎಲ್ 2013ರ ಆವೃತ್ತಿಯಲ್ಲಿ ಮೇ 18 ರಂದು ನಡೆದ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಅರ್ಧ ಶತಕ ಸಿಡಿಸಿದ್ದರು. 29 ಎಸೆತಗಳಲ್ಲಿ 56 ರನ್ ಬಾರಿಸಿದ್ದರು. 2016ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 113 ರನ್ ಬಾರಿಸಿದ್ದರು. 2023 ರಲ್ಲಿ ಇದೇ ದಿನದಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ 63 ಎಸೆತಗಳಲ್ಲಿ 100 ರನ್ ಗಳಿಸಿದರು.
ಐಪಿಎಲ್ 2024 ರಲ್ಲಿಯೂ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಆಟಗಾರನಾಗಿ ಮುಂದುವರೆದಿದ್ದಾರೆ. 13 ಪಂದ್ಯಗಳಲ್ಲಿ 155.16 ಸ್ಟ್ರೈಕ್ ರೇಟ್‌ನಲ್ಲಿ 661 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್‌ಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಪ್ರಸ್ತುತ IPL 2024 ಅಂಕಪಟ್ಟಿಯಲ್ಲಿ, ಆರ್ ಸಿಬಿ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.