ಪುಣೆ: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ತಂಡ 2ನೇ ದಿನದಾಟ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿದ್ದು, ಮಾತ್ರವಲ್ಲದೇ 301 ರನ್ ಮುನ್ನಡೆ ಪಡೆದುಕೊಂಡಿದೆ.
ಭಾರತವನ್ನು ಕೇವಲ 156 ರನ್ ಗಳಿಗೇ ಕಟ್ಟಿಹಾಕಿದ ನ್ಯೂಜಿಲೆಂಡ್ ತಂಡ 103 ರನ್ ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿತು.
ಭಾರತದ ಪ್ರಬಲ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ತಂಡ ದಿನದಾಟ ಅಂತ್ಯಕ್ಕೆ 198ರನ್ ಕಲೆಹಾಕಿದೆ. ನ್ಯೂಜಿಲೆಂಡ್ ಪರ ನಾಯಕ ಟಾಮ್ ಲಾಥಮ್ 86 ರನ್ ಗಳಿಸಿದರೆ, ಡೆವಾನ್ ಕಾನ್ವೆ (17), ವಿಲ್ ಯಂಗ್ (23), ರಚಿನ್ ರವೀಂದ್ರ (9), ಡರಿಲ್ ಮಿಚೆಲ್ (18) ಬೇಗನೇ ಔಟಾದರು.
30 ರನ್ ಗಳಿಸಿರುವ ಟಾಮ್ ಬ್ಲಂಡಲ್ ಮತ್ತು 9 ರನ್ ಗಳಿಸಿರುವ ಗ್ಲೇನ್ ಫಿಲಿಪ್ಸ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ 301ರನ್ ಗಳ ಮುನ್ನಡೆಯಲ್ಲಿದೆ.
ಭಾರತದ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದಿದ್ದು, ಆರ್ ಅಶ್ವಿನ್ ಒಂದು ವಿಕೆಟ್ ಪಡೆದಿದ್ದಾರೆ.