ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್, ಐಪಿಎಲ್ 2025ನೇ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 0, 8 ಮತ್ತು 13 ರನ್ ಗಳಿಸಿದ್ದಾರೆ. ಆರಂಭಿಕರಾಗಿ ಬರುವ ರೋಹಿತ್ ಅವರ ಕಳಪೆ ಪ್ರದರ್ಶನ ಮುಂಬೈ ತಂಡದ ಮೇಲೂ ಪರಿಣಾಮ ಬೀರಿದೆ.
ಮುಂಬೈ ತಂಡ ಸದ್ಯ ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಜಯ ಸಾಧಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯವನ್ನು ಗೆಲ್ಲುವ ಮೊದಲು ಅವರು ಮೊದಲೆರಡು ಪಂದ್ಯಗಳನ್ನು ಸೋತಿದ್ದರು. ಮುಂಬೈ ತಂಡವು ಶುಕ್ರವಾರ ಲಕ್ನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ.
ಪಂದ್ಯಕ್ಕೂ ಮುನ್ನ, ರೋಹಿತ್ ಶರ್ಮಾ ಮತ್ತು ಎಲ್‌ಎಸ್‌ಜಿ ಮಾರ್ಗದರ್ಶಕ ಜಹೀರ್ ಖಾನ್ ನಡುವಿನ ಸಂಭಾಷಣೆ ಇದೀಗ ವೈರಲ್ ಆಗಿದೆ. 'ಜೋ ಜಬ್ ಕರ್ನಾ ಥಾ, ಮೈನೆ ಕಿಯಾ ಬರಾಬರ್ ಸೆ, ಅಬ್ ಮೇರೆಕೋ ಕುಚ್ ಕರ್ನೇ ಕಿ ಜರೂರತ್ ನಹೀ ಹೈ (ಏನು ಮಾಡಬೇಕೋ ಅದನ್ನು ನಾನು ಸರಿಯಾಗಿ ಮಾಡಿದ್ದೇನೆ, ಈಗ ನಾನು ಏನೂ ಮಾಡಬೇಕಾಗಿಲ್ಲ)' ಎಂದು ರೋಹಿತ್ ಶರ್ಮಾ ಜಹೀರ್‌ಗೆ ಹೇಳುತ್ತಿರುವುದನ್ನು ಕೇಳಬಹುದು. ಈ ಸಂಭಾಷಣೆಯ ವೇಳೆ ಎಲ್ಎಸ್‌ಜಿ ತಂಡದ ನಾಯಕ ರಿಷಭ್ ಪಂತ್ ಬಂದು ರೋಹಿತ್ ಅವರನ್ನು ಹಿಂದಿನಿಂದ ಅಪ್ಪಿಕೊಳ್ಳುತ್ತಾರೆ.
ಸಂಭಾಷಣೆಯ ಸಂದರ್ಭ ಯಾವುದೆಂದು ಸ್ಪಷ್ಟವಾಗಿಲ್ಲದಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಭಾಷಣೆಯ ಕುರಿತು ಕೆಲವು ಊಹಾಪೋಹಗಳಲ್ಲಿ ತೊಡಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಕ್ಕೂ ಮುನ್ನ, ಎಲ್ಲರ ಕಣ್ಣುಗಳು ಮುಂಬೈ ಇಂಡಿಯನ್ಸ್ (MI) ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೇಲೆ ನೆಟ್ಟಿರುತ್ತವೆ. ಸದ್ಯ, ರೋಹಿತ್ ಉತ್ತಮ ಫಾರ್ಮ್ ಕಂಡುಕೊಳ್ಳಲು ಹೋರಾಡುತ್ತಿದ್ದಾರೆ.
ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ LSG ಮತ್ತು MI ತಂಡಗಳು ಒಂದರಲ್ಲಿ ಗೆಲುವು ಸಾಧಿಸಿದ್ದು, ಶುಕ್ರವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲ್ಲುವುದು ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ ಮುಂಬೈ ತಂಡ ಆರನೇ ಸ್ಥಾನದಲ್ಲಿದ್ದರೆ, ಇತ್ತ ಎಲ್‌ಎಸ್‌ಜಿ 7ನೇ ಸ್ಥಾನದಲ್ಲಿದೆ.