ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಇತ್ತೀಚಿನ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, 2027ರ 50 ಓವರ್‌ಗಳ ವಿಶ್ವಕಪ್‌ವರೆಗೆ ತಂಡದಲ್ಲಿ ಮುಂದುವರಿಯುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಟೀಂ ಇಂಡಿಯಾಗೆ ನಾಯಕ ಯಾರಾಗಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ.
'ಹಾರ್ದಿಕ್ ಪಾಂಡ್ಯ ಅವರನ್ನು ವೈಟ್ ಬಾಲ್ ಕ್ರಿಕೆಟ್‌ಗೆ ನಾಯಕನನ್ನಾಗಿ ನಾನು ಆಯ್ಕೆ ಮಾಡುತ್ತೇನೆ. ಈ ಹುದ್ದೆಗೆ ಹಲವು ಸ್ಪರ್ಧಿಗಳಿದ್ದಾರೆ. ಆದರೆ, ಪಾಂಡ್ಯ ಅವರು ನನ್ನ ಆಯ್ಕೆ' ಎಂದು ಗ್ರೇಟರ್ ನೋಯ್ಡಾದಲ್ಲಿ ನಡೆದ ಪಿಜಿಟಿಐ ಪ್ರೊ-ಆಮ್ ಕಾರ್ಯಕ್ರಮದ ವೇಳೆ ಕಪಿಲ್ ದೇವ್ ಮೈಖೇಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಪಾಂಡ್ಯ ಅವರು ಯಂಗ್ ಆಗಿದ್ದು, ಮುಂದಿನ ಐಸಿಸಿ ಟೂರ್ನಿಗಳಿಗೆ ಅವರ ಸುತ್ತ ತಂಡವನ್ನು ನಿರ್ಮಿಸಬಹುದು. ಹಾರ್ದಿಕ್ ಟೆಸ್ಟ್ ಕ್ರಿಕೆಟ್ ಕೂಡ ಆಡಬೇಕು ಮತ್ತು ಅವರು ಆಡುತ್ತಿಲ್ಲವಾದ್ದರಿಂದ, ಭಾರತಕ್ಕೆ ಮೂರು ಸ್ವರೂಪಗಳಿಗೆ ಬಹು ನಾಯಕರ ಅಗತ್ಯವಿರುತ್ತದೆ' ಎಂದು ಕಪಿಲ್ ಹೇಳಿದರು.
ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ವೇಳೆಯಲ್ಲಿ ಪಾಂಡ್ಯ ಭಾರತದ ಏಕದಿನ ಮತ್ತು ಟಿ20ಐ ಕ್ರಿಕೆಟ್‌ನ ಉಪ ನಾಯಕರಾಗಿದ್ದರು. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ ಪಾಂಡ್ಯ ಅವರು ಅಧಿಕೃತ ನಾಯಕತ್ವದ ಪಾತ್ರದಿಂದ ಹೊರಗುಳಿದಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಟಿ20 ತಂಡದ ಖಾಯಂ ನಾಯಕರನ್ನಾಗಿ ನೇಮಿಸಲಾಗಿದ್ದು, ಶುಭಮನ್ ಗಿಲ್ ಅವರನ್ನು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಉಪನಾಯಕರನ್ನಾಗಿ ನೇಮಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (ಎಂಐ) ನಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಟೆಸ್ಟ್ ಉಪನಾಯಕ ಜಸ್ಪ್ರೀತ್ ಬುಮ್ರಾ ಇದ್ದರೂ ಕೂಡ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ. ನಾಯಕನಾಗಿ ಪಾಂಡ್ಯ ಐಪಿಎಲ್‌ನಲ್ಲಿ ಮಿಶ್ರ ಯಶಸ್ಸನ್ನು ಕಂಡಿದ್ದಾರೆ.
ಪಾಂಡ್ಯ ಮೊದಲ ಬಾರಿಗೆ ಐಪಿಎಲ್ 2022ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದರು. ಪಾಂಡ್ಯ ನಾಯಕರಾಗಿದ್ದ ಅವಧಿಯಲ್ಲಿ ಗುಜರಾತ್ ತಂಡ ಒಮ್ಮೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು ಮತ್ತು ಮತ್ತೊಮ್ಮೆ ರನ್ನರ್ ಅಪ್ ಸ್ಥಾನ ಪಡೆಯಿತು.
2024 ರಲ್ಲಿ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿದರು.