ನವದೆಹಲಿ: ಕಳೆದ ವರ್ಷ ಗಾಯಗೊಂಡು ಐಪಿಎಲ್ 2025ರಲ್ಲಿ ಈವರೆಗೂ ಹೊರಗುಳಿದಿದ್ದ ವೇಗದ ಬೌಲರ್ ಮಯಾಂಕ್ ಯಾದವ್ ಇದೀಗ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ಸೇರಿಕೊಂಡಿದ್ದು, ತಂಡಕ್ಕೆ ಬಲ ಬಂದಂತಾಗಿದೆ. 22 ವರ್ಷದ ವೇಗಿ ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
LSG ತನ್ನ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, 'ಮಯಾಂಕ್ ಯಾದವ್ ಹಿಂತಿರುಗಿದ್ದಾರೆ' ಎಂಬ ಶೀರ್ಷಿಕೆ ನೀಡಿದೆ.
ಬೆನ್ನುನೋವಿನಿಂದ ಬಳಲುತ್ತಿದ್ದ ಮಯಾಂಕ್ ಈ ಆವೃತ್ತಿಯ ಆರಂಭದಲ್ಲಿ ಮರಳಲು ಬಹುತೇಕ ಸಿದ್ದರಾಗಿದ್ದರು. ಆದರೆ, ಆಕಸ್ಮಿಕವಾಗಿ ಕಾಲ್ಬೆರಳಿಗೆ ಉಂಟಾದ ಗಾಯದಿಂದಾಗಿ ಸೋಂಕಿನಿಂದ ಬಳಲುತ್ತಿದ್ದ ಅವರು ಟೂರ್ನಿಗೆ ಮರಳಲು ವಿಳಂಬವಾಯಿತು.
ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಮೂರು ಟಿ20 ಸರಣಿಯಲ್ಲಿ ಮಯಾಂಕ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ನಂತರ ಗಾಯದಿಂದಾಗಿ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ ಪಡೆದಿದ್ದರು.
ಇದಕ್ಕೂ ಮುನ್ನ LSG ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ಮಯಾಂಕ್ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ನಿಜವಾಗಿಯೂ ಉತ್ತಮವಾಗಿದೆ. ನಿನ್ನೆ NCA ನಲ್ಲಿ ಅವರು ಬೌಲಿಂಗ್ ಮಾಡುತ್ತಿರುವ ಕೆಲವು ವಿಡಿಯೋಗಳನ್ನು ನಾನು ನೋಡಿದೆ. ಅವರು ಶೇ 90 ರಿಂದ 95 ರಷ್ಟು ಬೌಲಿಂಗ್ ಮಾಡುತ್ತಿದ್ದರು ಎಂದಿದ್ದರು.
ಮಯಾಂಕ್ ಕಳೆದ ಆವೃತ್ತಿಯಲ್ಲಿ ತಮ್ಮ ಅಸಾಮಾನ್ಯ ವೇಗ ಮತ್ತು ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ಬೌಲಿಂಗ್ ವೇಳೆ ನಿರಂತರವಾಗಿ ಗಂಟೆಗೆ 150 ಕಿಮೀಗಿಂತ ಹೆಚ್ಚಿನ ವೇಗವನ್ನು ಕಾಯ್ದುಕೊಂಡರು. ಕಳೆದ ಆವೃತ್ತಿಯಲ್ಲಿ LSG ಪರ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರು. ಮೆಗಾ ಹರಾಜಿಗೂ ಮುನ್ನ ಎಲ್ಎಸ್‌ಜಿ ಅವರನ್ನು ಉಳಿಸಿಕೊಂಡಿತ್ತು.
ಈ ಆವೃತ್ತಿಯ ಆರಂಭಿಕ ಪಂದ್ಯಕ್ಕೂ ಮುನ್ನವೇ ಎಲ್‌ಎಸ್‌ಜಿಯ ಮೊಹ್ಸಿನ್ ಖಾನ್, ಮಯಾಂಕ್, ಆವೇಶ್ ಖಾನ್ ಮತ್ತು ಆಕಾಶ್ ದೀಪ್ ಎಲ್ಲರೂ ಲಭ್ಯವಿರಲಿಲ್ಲ. ಆಗ ಫ್ರಾಂಚೈಸಿ ಅನುಭವಿ ಶಾರ್ದೂಲ್ ಠಾಕೂರ್ ಅವರನ್ನು ಕರೆತಂದಿತು. ನಂತರ ಆವೇಶ್ ಮತ್ತು ಆಕಾಶ್ ದೀಪ್ ತಂಡವನ್ನು ಸೇರಿಕೊಂಡರು.
ಎಲ್‌ಎಸ್‌ಜಿ ಸದ್ಯ ಏಳು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಲಕ್ನೋ ತಂಡವು ಶನಿವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ.