ಫೀಲ್ಡಿಂಗ್ ಮಾಡುವಾಗ ಭುಜದ ಗಾಯಕ್ಕೆ ತುತ್ತಾಗಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಭಾರತ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ (ಇಸಿಬಿ) ಶುಕ್ರವಾರ ತಿಳಿಸಿದೆ.
ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಗುರುವಾರ ಓವಲ್‌ನಲ್ಲಿ ಆರಂಭಗೊಂಡ ಅಂತಿಮ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತ್ತು.
ಕರುಣ್ ನಾಯರ್ ಅವರ ಹೊಡೆತದಲ್ಲಿ ಲಾಂಗ್-ಆಫ್‌ನಲ್ಲಿ ಬೌಂಡರಿಯನ್ನು ತಪ್ಪಿಸಲು ವೋಕ್ಸ್ ಡೈವ್ ಮಾಡುವಾಗ ಬಲವಾಗಿ ಬಿದ್ದ ನಂತರ ಗಾಯಗೊಂಡರು.
'ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಎಡ ಭುಜಕ್ಕೆ ಗಾಯವಾದ ನಂತರ ಕ್ರಿಸ್ ವೋಕ್ಸ್ ಅವರನ್ನು ಮೇಲ್ವಿಚಾರಣೆ ಮಾಡಲಾಗುವುದು. ಅವರು ಇನ್ನು ಮುಂದೆ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಮತ್ತು ಸರಣಿ ಮುಗಿದ ನಂತರ ಅವರ ಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಲಾಗುತ್ತದೆ' ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರ ವೋಕ್ಸ್ 14 ಓವರ್‌ಗಳನ್ನು ಬೌಲ್ ಮಾಡಿ 46 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು ಮತ್ತು ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದ್ದರು.
ಭುಜದ ಗಾಯದಿಂದಾಗಿ ಇಂಗ್ಲೆಂಡ್ ಈಗಾಗಲೇ ನಾಯಕ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇಲ್ಲದೆ ಆಟವಾಡುತ್ತಿದೆ.