3,149 ದಿನಗಳು, ಲೆಕ್ಕವಿಲ್ಲದಷ್ಟು ದೇಶೀಯ ರನ್‌ಗಳು ಮತ್ತು ಎಂಟು ವರ್ಷಗಳ ಕಾಯುವಿಕೆ ಬಳಿಕ ಕನ್ನಡಿಗ ಕರುಣ್ ನಾಯರ್ ಅಂತಿಮವಾಗಿ ಟೆಸ್ಟ್ ಪಂದ್ಯದಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ನ ಮೊದಲ ದಿನದಂದು ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕರುಣ್ ನಾಯರ್ ಭಾರತಕ್ಕೆ ಆಸರೆಯಾದರು. ತಮ್ಮ ಕುಸಿಯುತ್ತಿರುವ ಟೆಸ್ಟ್ ವೃತ್ತಿಜೀವನವನ್ನು ಮತ್ತೆ ಹಳಿಗೆ ತರಲು ಅದ್ಭುತ ಅರ್ಧಶತಕ ಗಳಿಸಿದರು.
ಸತತ ವೈಫಲ್ಯಗಳ ನಂತರ ಭಾರತ ತಂಡ ಕರುಣ್ ಅವರನ್ನು ನಾಲ್ಕನೇ ಟೆಸ್ಟ್‌ಗೆ ಕೈಬಿಟ್ಟಾಗ, 33 ವರ್ಷದ ಆಟಗಾರನಿಗೆ ಇದೇ ಕೊನೆ ಎನ್ನುವಂತೆ ಭಾಸವಾಗಿತ್ತು. ಆದರೆ, ವಿಧಿಯೇ ಅವರಿಗೆ ಕೊನೆಯ ಅವಕಾಶ ನೀಡಿತು. ರಿಷಭ್ ಪಂತ್ ಗಾಯಗೊಂಡು ಟೂರ್ನಿಯಿಂದಲೇ ಹೊರಗುಳಿದಾಗ ಮುಖ್ಯ ಕೋಚ್ ಗೌತಮ್ ಗಂಭೀರ್ ಅನುಭವಿ ಕರುಣ್ ನಾಯರ್ ಕಡೆಗೆ ತಿರುಗಿ, ಅವರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಿಟ್ಟರು. ಪಂತ್ ಕೂಡ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ದೇಶೀಯ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ಕೂಡ ಇದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸಾಕಷ್ಟು ರನ್ ಗಳಿಸಿದ್ದರು.
ಭಾರತ ಸಂಕಷ್ಟದಲ್ಲಿದ್ದಾಗ, ಕರುಣ್ ನಾಯರ್ ನಿಜವಾಗಿಯೂ ತಾಳ್ಮೆಯ ಆಟವಾಡಿದರು. ಅಭಿಮಾನಿಗಳಿಗೆ ಭವಿಷ್ಯದ ಮುಖ್ಯ ಆಧಾರಸ್ತಂಭವಾಗಿ ಕಂಡರು. 2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಆ ಅವಿಸ್ಮರಣೀಯ *303 ರನ್‌ಗಳ ನಂತರ ಇದು ಅವರ ಚೊಚ್ಚಲ ಅರ್ಧಶತಕವಾಗಿತ್ತು.
ಕರುಣ್ ನಾಯರ್ ಅವರ ಬ್ಯಾಟಿಂಗ್ ಆಕರ್ಷಕವಾಗಿರಲಿಲ್ಲ, ಪ್ರಬಲವಾಗಿರಲಿಲ್ಲ. ಆದರೂ ಭಾರತ ತಂಡಕ್ಕೆ ಬೇಕಾಗಿದ್ದನ್ನು ಅವರು ಗಳಿಸಿದರು. ಈ ಸರಣಿಯ ಆರು ಇನಿಂಗ್ಸ್‌ಗಳಲ್ಲಿ ಕೇವಲ 131 ರನ್ ಗಳಿಸಿದ್ದ ಕರುಣ್ ಅವರ ಭವಿಷ್ಯದ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿದ್ದವು. ಇದೀಗ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕರುಣ್ ಉತ್ತಮ ಪ್ರದರ್ಶನ ನೀಡಿದರು.
ಆದರೆ, ಕೆಲಸ ಇನ್ನೂ ಮುಗಿದಿಲ್ಲ. ಅವರು 1 ನೇ ದಿನದ ಕಠಿಣ ಬ್ಯಾಟಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಕೊನೆಯ ಮಾನ್ಯತೆ ಪಡೆದ ಬ್ಯಾಟ್ಸ್‌ಮನ್ ವಾಷಿಂಗ್ಟನ್ ಸುಂದರ್ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 52* ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿರುವ ನಾಯರ್ ಮೊದಲ ಸೆಷನ್ ಅನ್ನು ತಾಳ್ಮೆಯಿಂದಲೇ ನಿಭಾಯಿಸಬೇಕಿದೆ. ಆದಾಗ್ಯೂ, ದಿನದ ಕೊನೆಯ ಹಂತದಲ್ಲಿ ಬೌಂಡರಿಯನ್ನು ತಪ್ಪಿಸಲು ಪ್ರಯತ್ನಿಸುವಾಗ ಭುಜಕ್ಕೆ ಗಾಯಗೊಂಡಿದ್ದ ಕ್ರಿಸ್ ವೋಕ್ಸ್ ಇಂದು ಇಂಗ್ಲೆಂಡ್ ತಂಡದಲ್ಲಿ ಇಲ್ಲದಿರುವ ಸಾಧ್ಯತೆ ಇದೆ.