ತಂಡದ ಗೆಲುವು ಅಥವಾ ಸೋಲಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತ್ರ ಕಾರಣ ಎಂದು ಮಾಜಿ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-2 ಅಂತರದಲ್ಲಿ ಸಮಬಲ ಸಾಧಿಸಿದ ನಂತರ ಅವರ ಹೇಳಿಕೆಗಳು ಬಂದಿವೆ. ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ, ಗಂಭೀರ್ ಬಾಂಗ್ಲಾದೇಶ ವಿರುದ್ಧ ಕೇವಲ ಒಂದು ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿದ್ದಾರೆ.
ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ಕಾರ್ತಿಕ್, ಗಂಭೀರ್ ಬ್ಯಾಟಿಂಗ್‌ನಷ್ಟೇ 20 ವಿಕೆಟ್‌ಗಳನ್ನು ಪಡೆಯುವತ್ತಲೂ ಗಮನಹರಿಸಬೇಕು. ತಂಡದ ಮೇಲೆ ಹಿಡಿತ ಸಾಧಿಸಿರುವುದು ಮುಖ್ಯ ಕೋಚ್ ಮತ್ತು ನಾಯಕ ಶುಭಮನ್ ಗಿಲ್ ಜೊತೆಗೆ ತಂಡವನ್ನು ಮುನ್ನಡೆಸಬೇಕಿರುವುದು ಅವರೇ. ಭಾರತ ತಂಡದಲ್ಲಿ ಏನೇ ನಡೆದರೂ ಅದಕ್ಕೆ ಗಂಭೀರ್ ಜವಾಬ್ದಾರರಾಗಿರುತ್ತಾರೆ' ಎಂದರು.
'ಗಂಭೀರ್ ಈಗ ತನ್ನ ಇಚ್ಛೆಯಂತೆ ನಡೆಯುತ್ತಿದ್ದಾರೆ. ಆದ್ದರಿಂದ ಭಾರತೀಯ ತಂಡದಲ್ಲಿ ನಡೆಯುವ ಎಲ್ಲದಕ್ಕೂ ಅವರೇ ಜವಾಬ್ದಾರರಾಗಿರುತ್ತಾರೆ. ತಂಡ ಚೆನ್ನಾಗಿ ಆಡಿದರೆ, ಅವರಿಗೆ ಶ್ರೇಯ ಸಲ್ಲಬೇಕು. ತಂಡ ಚೆನ್ನಾಗಿ ಆಡದಿದ್ದರೆ, ಅವರು ಕೈ ಎತ್ತಿ 'ನಾವು ತಪ್ಪು ಮಾಡಿದ್ದೇವೆ' ಎಂದು ಹೇಳಬೇಕು. ಅವರು ತಂಡದ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಶುಭಮನ್ ಜೊತೆಗೂಡಿ ಅವರು ಈ ತಂಡವನ್ನು ಮುನ್ನಡೆಸಬೇಕು. ಅವರು ಮಾಡಬೇಕಿರುವ ಒಂದು ವಿಷಯವೆಂದರೆ, ಬ್ಯಾಟಿಂಗ್‌ನಲ್ಲಿ ಆಳ ಮುಖ್ಯ ಎಂದು ಭಾವಿಸುವಷ್ಟೇ ಅಲ್ಲದೆ 20 ವಿಕೆಟ್‌ಗಳನ್ನು ಪಡೆಯುವ ಬಗ್ಗೆಯೂ ಗಂಭೀರವಾಗಿ ಪರಿಗಣಿಸಬೇಕು' ಎಂದು ಕಾರ್ತಿಕ್ ಹೇಳಿದರು.
ಭಾರತದ ಹೊಸ ಮುಖ್ಯ ಕೋಚ್ ಆಗಿ ಮೊದಲ ಟೆಸ್ಟ್ ಸರಣಿಯಲ್ಲಿ, ಮೆನ್ ಇನ್ ಬ್ಲೂ ತಂಡವು ತವರಿನಲ್ಲಿ ಬಾಂಗ್ಲಾದೇಶವನ್ನು ವೈಟ್‌ವಾಶ್ ಮಾಡುವಲ್ಲಿ ಯಶಸ್ವಿಯಾಯಿತು. ನಂತರ, ನ್ಯೂಜಿಲೆಂಡ್ ವಿರುದ್ಧ (0-3) ವೈಟ್‌ವಾಶ್ ಆಯಿತು ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ವಿರುದ್ಧ 1-3 ಅಂತರದಿಂದ ಸೋತಿತು.
'ಇದಲ್ಲದೆ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಕೋಚ್ ಆಗಿ ಗಂಭೀರ್ ಅವರ ದಾಖಲೆ ಅದ್ಭುತವಾಗಿದ್ದರೂ, ಟೆಸ್ಟ್‌ಗಳ ವಿಷಯಕ್ಕೆ ಬಂದಾಗ ಅವರು ಇನ್ನೂ ಕಲಿಯುವುದು ಬಹಳಷ್ಟಿದೆ. ಅವರು ಅದ್ಭುತ ವೈಟ್-ಬಾಲ್ ತರಬೇತುದಾರ ಮತ್ತು ಫಲಿತಾಂಶಗಳು ನಮಗೆ ಕಾಣುತ್ತಿವೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ, ಅವರು ಕೆಲಸವನ್ನು ಕಲಿಯುತ್ತಿದ್ದಾರೆ' ಎಂದು ಕಾರ್ತಿಕ್ ಹೇಳಿದರು.