ಕೋಲ್ಕತ್ತಾ: ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಆಡಲು ಸಾಧ್ಯವಾಗುವರೆಗೂ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಬೇಕು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮುಂಬರುವ ಏಕದಿನ ಸರಣಿಯು ಈ ಜೋಡಿಗೆ ಕೊನೆಯ ಸರಣಿಯಾಗಿರಬಹುದು ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಗಂಗೂಲಿ, ನನಗೆ ಇದರ ಬಗ್ಗೆ ತಿಳಿದಿಲ್ಲ, ಇದರ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ, ಊಹಾಪೋಹಗಳಿಂದ ಅಲ್ಲ, ಪ್ರದರ್ಶನದ ಆಧಾರದ ಮೇಲೆ ಮುಂದುವರಿಯಬೇಕು ಎಂದು ಒತ್ತಿ ಹೇಳಿದರು.
'ಹೇಳುವುದು ಕಷ್ಟ. ಚೆನ್ನಾಗಿ ಆಡುವರು ಆಡುತ್ತಾರೆ. ಚೆನ್ನಾಗಿ ಆಡಿದರೆ, ಅಂತವರು ಮುಂದುವರಿಯಬೇಕು. ಕೊಹ್ಲಿಯ ಏಕದಿನ ದಾಖಲೆ ಅದ್ಭುತವಾಗಿದೆ, ರೋಹಿತ್ ಶರ್ಮಾ ಅವರದ್ದು ಕೂಡ. ಇಬ್ಬರೂ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ' ಎಂದು ಅವರು AWL ಅಗ್ರಿ ಬ್ಯುಸಿನೆಸ್ ಲಿಮಿಟೆಡ್ ಕಾರ್ಯಕ್ರಮದಲ್ಲಿ ಹೇಳಿದರು.
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸವು ಇಬ್ಬರು ಭಾರತೀಯ ಶ್ರೇಷ್ಠ ಆಟಗಾರರಾದ ಕೊಹ್ಲಿ ಮತ್ತು ರೋಹಿತ್ ಅವರ ಕೊನೆಯ ODI ಸರಣಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅವರು ಈಗಾಗಲೇ T20I ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಭಾರತದ ಆಸ್ಟ್ರೇಲಿಯಾದ ಏಕದಿನ ಪ್ರವಾಸವು ಅಕ್ಟೋಬರ್ 19 ರಂದು ಆರಂಭವಾಗಲಿದ್ದು, ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ನಂತರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
2026 ರಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧದ ಮತ್ತೊಂದು ಪಂದ್ಯವು ನಡೆಯಲಿದೆ.
ಸೆಪ್ಟೆಂಬರ್ 9 ರಿಂದ ದುಬೈನಲ್ಲಿ ನಡೆಯಲಿರುವ ಟಿ20 ಏಷ್ಯಾ ಕಪ್ ಬಗ್ಗೆ ಮಾತನಾಡಿದ ಗಂಗೂಲಿ, ಇಂಗ್ಲೆಂಡ್‌ನಲ್ಲಿ ನಡೆದ ಐದು ಟೆಸ್ಟ್ ಪಂದ್ಯಗಳ ನಂತರ ಅಗತ್ಯವಾದ ವಿರಾಮದ ನಂತರ ಭಾರತ ತಂಡವು ನೆಚ್ಚಿನ ತಂಡವಾಗಲಿದೆ ಎಂದು ಹೇಳಿದರು.
'ಭಾರತ ತುಂಬಾ ಬಲಿಷ್ಠವಾಗಿದೆ ಮತ್ತು ಅವರು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಬಲಿಷ್ಠರಾಗಿದ್ದರೆ, ವೈಟ್ ಬಾಲ್ ಕ್ರಿಕೆಟ್‌ನಲ್ಲಿಯೂ ಅವರು ಇನ್ನೂ ಬಲಿಷ್ಠರು. ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ, ಭಾರತವು ನೆಚ್ಚಿನ ತಂಡವಾಗಿದೆ ಮತ್ತು ದುಬೈನ ಆ ಉತ್ತಮ ವಿಕೆಟ್‌ಗಳಲ್ಲಿ ಅವರನ್ನು ಸೋಲಿಸುವುದು ತುಂಬಾ ಕಠಿಣವಾಗಿರುತ್ತದೆ' ಎಂದರು.
ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ಅವರ ಬಗ್ಗೆ ಕೇಳಿದಾಗ, ಭಾರತದ ಯುವ ಟೆಸ್ಟ್ ನಾಯಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಭವಿಷ್ಯವು ಭರವಸೆಯಿಂದ ತುಂಬಿದೆ ಎಂದು ಅವರು ಹೇಳಿದರು.